Sunday, July 26, 2026
Join WhatsApp Group
HomeLocal Storyಹುತ್ತದ ನಡುವಿನ ಪವಾಡದ ತಾಯಿ 'ಬಳೆ ಪದ್ಮಾವತಿ'

ಹುತ್ತದ ನಡುವಿನ ಪವಾಡದ ತಾಯಿ ‘ಬಳೆ ಪದ್ಮಾವತಿ’

ಹುತ್ತದ ಮಧ್ಯೆ ನೆಲೆಸಿರುವ ದೇವಿ… ನೂರಾರು ಬಳೆಗಳ ಹರಕೆ… ಭಕ್ತರ ಕನಸಿನಲ್ಲಿ ಕಾಣಿಸಿಕೊಂಡು ತನ್ನ ನೆಲೆ ತೋರಿಸಿದಳೆಂಬ ನಂಬಿಕೆ… ಇವೆಲ್ಲವೂ ಒಂದೇ ಕ್ಷೇತ್ರದ ವಿಶೇಷಗಳೆಂದರೆ ನಂಬುತ್ತೀರಾ? ಜೋಗದ ದಟ್ಟ ಅರಣ್ಯದ ಮಧ್ಯೆ ಅಡಗಿರುವ ವಡನಬೈಲು ಬಳೆ ಪದ್ಮಾವತಿ ಕ್ಷೇತ್ರದ ಮಹಿಮೆಯಿದು.

ಜೋಗ ಜಲಪಾತದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರವು ಜೈನ ಮತ್ತು ಹಿಂದೂ ಪರಂಪರೆ ಎರಡಕ್ಕೂ ಗೌರವದ ಪುಣ್ಯಕ್ಷೇತ್ರವಾಗಿದೆ. ವರ್ಷಪೂರ್ತಿ ಸಾವಿರಾರು ಭಕ್ತರು ಇಲ್ಲಿ ಬಂದು ದೇವಿಯ ದರ್ಶನ ಪಡೆದು ಹರಕೆ ಸಲ್ಲಿಸುತ್ತಾರೆ.

ಸುಮಾರು 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ದೇವಿಯ ಮೂಲ ವಿಗ್ರಹವು ಆರಂಭದಲ್ಲಿ ಹೆಬ್ಬೈಲು ಗ್ರಾಮದಲ್ಲಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ 1960ರ ದಶಕದಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದಾಗ ಹೆಬ್ಬೈಲು ಸಂಪೂರ್ಣವಾಗಿ ಮುಳುಗಡೆಯಾಯಿತು.

ಆಗ ದೇವಿಯ ಆರಾಧನೆ ನಡೆಸುತ್ತಿದ್ದ ವೀರ ರಾಜಯ್ಯ ಜೈನ್ ಅವರ ಕುಟುಂಬಸ್ಥರು ವಿಗ್ರಹವನ್ನು ಸುರಕ್ಷಿತವಾಗಿ ತೆಗೆದುಕೊಂಡು ಬಂದು ಈಗಿನ ವಡನಬೈಲು ಪ್ರದೇಶದಲ್ಲಿ ಪ್ರತಿಷ್ಠಾಪಿಸಿದರು.

https://vadanbailammanavaru.org

ಇಲ್ಲಿಂದಲೇ ಆರಂಭವಾಗುತ್ತದೆ ಭಕ್ತರು ಭಕ್ತಿಭಾವದಿಂದ ಹೇಳುವ ಒಂದು ಕುತೂಹಲಕರ ಕಥೆ. ಜಲಾಶಯ ನಿರ್ಮಾಣದ ನಂತರ ಕೆಲಕಾಲ ಪೂಜೆ ಸ್ಥಗಿತಗೊಂಡಾಗ, ದೇವಿಯು ಭಕ್ತರ ಕನಸಿನಲ್ಲಿ ಕಾಣಿಸಿಕೊಂಡು “ನನಗೆ ಇಲ್ಲಿ ನಿತ್ಯ ಪೂಜೆ ನಡೆಯಲಿ” ಎಂದು ಸೂಚಿಸಿದಳು ಎಂಬುದು ಸ್ಥಳೀಯ ನಂಬಿಕೆ.

ದೇವಿ ನಿಜವಾಗಿಯೂ ಇಲ್ಲಿದ್ದರೆ ಯಾವುದಾದರೂ ಪವಾಡ ತೋರಿಸು ಎಂದು ಪ್ರಾರ್ಥಿಸಿದ ಮರುದಿನವೇ ವಿಗ್ರಹದ ಸುತ್ತ ಸ್ವಯಂ ಹುತ್ತ ನಿರ್ಮಾಣವಾಗಿ, ನಾಗಗಳು ಕಾಣಿಸಿಕೊಂಡವು ಎನ್ನುವುದು ಭಕ್ತರ ಅನುಭವವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದಾಡುತ್ತಿದೆ. ಇಂದು ದೇವಿಯ ಸುತ್ತ ಸುಮಾರು 12 ಅಡಿ ಎತ್ತರದ ಹುತ್ತ ಬೆಳದಿರುವುದನ್ನು ಭಕ್ತರು ಭಕ್ತಿಯಿಂದ ಕಾಣುತ್ತಾರೆ.

ಈ ಕ್ಷೇತ್ರಕ್ಕೆ “ಬಳೆ ಪದ್ಮಾವತಿ” ಎಂಬ ಹೆಸರು ಬಂದಿರುವುದಕ್ಕೂ ವಿಶಿಷ್ಟ ಕಾರಣವಿದೆ. ಇಷ್ಟಾರ್ಥ ಸಿದ್ಧಿಯಾದ ಬಳಿಕ ಭಕ್ತರು ದೇವಿಗೆ ಗಾಜಿನ ಬಳೆಗಳು, ಬೆಳ್ಳಿ ಬಳೆಗಳು, ಚಿನ್ನದ ಬಳೆಗಳನ್ನು ಹರಕೆಯಾಗಿ ಅರ್ಪಿಸುತ್ತಾರೆ. ಈ ವಿಶಿಷ್ಟ ಸಂಪ್ರದಾಯವೇ ದೇವಿಗೆ “ಬಳೆ ಪದ್ಮಾವತಿ” ಎಂಬ ಹೆಸರನ್ನು ತಂದುಕೊಟ್ಟಿದೆ.

ಇಲ್ಲಿ ನೀಡುವ ಹುತ್ತದ ಮಣ್ಣಿನ ತೀರ್ಥಪ್ರಸಾದಕ್ಕೂ ವಿಶೇಷ ಮಹತ್ವವಿದೆ. ಇದನ್ನು ಸೇವಿಸಿದರೆ ಚರ್ಮರೋಗಗಳು ಕಡಿಮೆಯಾಗುತ್ತವೆ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬುದು ಅನೇಕ ಭಕ್ತರ ನಂಬಿಕೆ. ಇದೇ ರೀತಿ ಕ್ಷೇತ್ರದಲ್ಲಿರುವ ಏಳು ಹೆಡೆಯ ಮುಕ್ತಿ ನಾಗನ ವಿಗ್ರಹದ ಮುಂದೆ ನಾಗದೋಷ ಹಾಗೂ ಕಾಳಸರ್ಪ ದೋಷ ನಿವಾರಣೆಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.

ದೇವಾಲಯವು ಪ್ರತಿದಿನ ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಸಂಜೆ 3ರಿಂದ ರಾತ್ರಿ 7ರವರೆಗೆ ಭಕ್ತರ ದರ್ಶನಕ್ಕೆ ತೆರೆದಿರುತ್ತದೆ. ಮಧ್ಯಾಹ್ನ ಮತ್ತು ಸಂಜೆ ಆಗಮಿಸುವ ಭಕ್ತರಿಗೆ ಉಚಿತ ಅನ್ನದಾಸೋಹದ ವ್ಯವಸ್ಥೆಯೂ ಇದೆ.

ಒಂದು ವಿಷಯ ಮಾತ್ರ ನೆನಪಿರಲಿ. ಈ ಕ್ಷೇತ್ರವು ಶರಾವತಿ ವಿದ್ಯುತ್ ಯೋಜನೆಯ ಸಂರಕ್ಷಿತ ಪ್ರದೇಶದ ಸಮೀಪ ಇರುವುದರಿಂದ ಜೋಗ ಬಳಿಯ ಚೆಕ್‌ಪೋಸ್ಟ್ ಮೂಲಕ ಪ್ರವೇಶಿಸಬೇಕಾಗುತ್ತದೆ. ಅಲ್ಲಿ ಕೆಪಿಸಿಯಿಂದ ಅಗತ್ಯ ಅನುಮತಿ ಪಡೆದು ಮಾತ್ರ ದೇವಸ್ಥಾನಕ್ಕೆ ತೆರಳಬೇಕು.

ಇತಿಹಾಸ, ಪ್ರಕೃತಿ, ಜನನಂಬಿಕೆ ಮತ್ತು ಭಕ್ತಿಯ ಸಂಗಮವನ್ನು ಒಂದೇ ಸ್ಥಳದಲ್ಲಿ ಅನುಭವಿಸಬೇಕೆಂದರೆ, ಜೋಗದ ಕಾಡಿನ ಮಧ್ಯೆ ನೆಲೆಸಿರುವ ವಡನಬೈಲು ಬಳೆ ಪದ್ಮಾವತಿ ಕ್ಷೇತ್ರ ಒಮ್ಮೆ ಭೇಟಿ ನೀಡಲೇಬೇಕಾದ ಪುಣ್ಯಕ್ಷೇತ್ರವಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share