Monday, July 27, 2026
Join WhatsApp Group
HomeLocal Newsಅಲಂಕಾರಿಕ ದೀಪಗಳ ಯೋಜನೆಯಲ್ಲಿ ಅಕ್ರಮದ ವಾಸನೆ?

ಅಲಂಕಾರಿಕ ದೀಪಗಳ ಯೋಜನೆಯಲ್ಲಿ ಅಕ್ರಮದ ವಾಸನೆ?

ಕೋಟಿ ವೆಚ್ಚದ ಕಾಮಗಾರಿ, ಕೆಲವೇ ತಿಂಗಳಲ್ಲಿ ಕತ್ತಲೆ!; ಸಮಗ್ರ ತನಿಖೆಗೆ ಸೋಮೇಶ್ವರ ನಾಯ್ಕ ಆಗ್ರಹ

ಯಲ್ಲಾಪುರ: ಪಟ್ಟಣದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಅಲಂಕಾರಿಕ ವಿದ್ಯುತ್ ದೀಪಗಳ ಯೋಜನೆ ಈಗ ಕತ್ತಲೆಯಲ್ಲೇ ಮುಳುಗಿದೆಯೇ? ಕಾಮಗಾರಿ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ದೀಪಗಳು ಒಂದೊಂದಾಗಿ ನಿಷ್ಕ್ರಿಯವಾಗಿರುವುದು, ಅಂಡರ್‌ಗ್ರೌಂಡ್ ಕೇಬಲ್‌ಗಳು ರಸ್ತೆಯ ಮೇಲಕ್ಕೆ ಕಾಣಿಸಿಕೊಳ್ಳುತ್ತಿರುವುದು, ನಿರ್ವಹಣೆಯ ಹೊಣೆ ಹೊತ್ತುಕೊಳ್ಳಲು ಯಾವುದೇ ಇಲಾಖೆ ಮುಂದೆ ಬರದಿರುವುದು ಸೇರಿದಂತೆ ಹಲವು ಗಂಭೀರ ಪ್ರಶ್ನೆಗಳು ಇದೀಗ ಎದ್ದಿವೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಸೋಮೇಶ್ವರ ಮಾದೇವ ನಾಯ್ಕ ಅವರು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಸಲ್ಲಿಸಿರುವ ಸುದೀರ್ಘ ದೂರಿನಲ್ಲಿ, ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಹಾಗೂ ಅಕ್ರಮ ನಡೆದಿರುವ ಶಂಕೆ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದ್ದಾರೆ.

2023ರಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಟೆಂಡರ್ ಪ್ರಕ್ರಿಯೆಯಲ್ಲಿ ಯಲ್ಲಾಪುರ ಪಟ್ಟಣದಲ್ಲಿ ಸುಮಾರು 75 ಅಲಂಕಾರಿಕ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಡೆದ ಈ ಯೋಜನೆ, ಪಟ್ಟಣದ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಿದ್ದರೂ, ಕೆಲವೇ ತಿಂಗಳಲ್ಲಿ ಅನೇಕ ದೀಪಗಳು ಬೆಳಗುವುದನ್ನೇ ನಿಲ್ಲಿಸಿವೆ.

ಇದಷ್ಟೇ ಅಲ್ಲ, ಭೂಗತವಾಗಿ ಅಳವಡಿಸಬೇಕಿದ್ದ ವಿದ್ಯುತ್ ಕೇಬಲ್‌ಗಳು ಹಲವೆಡೆ ಹೊರಬಂದು ರಸ್ತೆಯ ಮೇಲ್ಭಾಗದಲ್ಲಿ ಕಾಣಿಸುತ್ತಿವೆ. ಇದು ಕಾಮಗಾರಿಯ ಗುಣಮಟ್ಟದ ಮೇಲೆಯೇ ಪ್ರಶ್ನೆ ಹುಟ್ಟುವಂತೆ ಮಾಡಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಾಮಗಾರಿಯ ನಿರ್ವಹಣೆ ಕುರಿತು ಲೋಕೋಪಯೋಗಿ ಇಲಾಖೆಯನ್ನು ಸಂಪರ್ಕಿಸಿದಾಗ, ಅದು ಪಟ್ಟಣ ಪಂಚಾಯಿತಿಯ ಜವಾಬ್ದಾರಿ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಬಂದಿರುವ ಉತ್ತರವೇ ಬೇರೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಧಿಕೃತವಾಗಿ ಹಸ್ತಾಂತರವಾಗದ ಕಾರಣ ಅದರ ನಿರ್ವಹಣೆ ನಮ್ಮ ವ್ಯಾಪ್ತಿಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇದರಿಂದ ಕಾಮಗಾರಿ ಪೂರ್ಣಗೊಂಡಿದೆಯೇ, ಆಗಿದ್ದರೆ ನಿರ್ವಹಣೆ ಯಾರ ಹೊಣೆ, ಇನ್ನೂ ಪೂರ್ಣವಾಗಿಲ್ಲದಿದ್ದರೆ ಬಿಲ್ ಪಾವತಿಯಾಗಿದೆಯೇ ಎಂಬ ಪ್ರಶ್ನೆಗಳು ಈಗ ಸಹಜವಾಗಿಯೇ ಉದ್ಭವಿಸಿವೆ.

ಕಾಮಗಾರಿಯ ಅಂದಾಜು ಪತ್ರಿಕೆ, ಗುಣಮಟ್ಟ ಪರಿಶೀಲನೆ, ಪಾವತಿ ಹಾಗೂ ಇತರೆ ದಾಖಲೆಗಳನ್ನು ತಿಳಿಯಲು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಅರ್ಜಿ ಸಲ್ಲಿಸಿದ್ದರೂ, ಅಧಿಕಾರಿಗಳು ಕೇಳಿದ ಮಾಹಿತಿಯನ್ನು ನೀಡಿಲ್ಲ ಎಂದು ಸೋಮೇಶ್ವರ ನಾಯ್ಕ ದೂರಿದ್ದಾರೆ.

“ನಾನು ಕೇಳಿರುವ ದಾಖಲೆಗಳನ್ನು ನೀಡಿದರೆ ಕಾಮಗಾರಿಯಲ್ಲಿನ ಅಕ್ರಮಗಳು ಹೊರಬೀಳುವ ಸಾಧ್ಯತೆ ಇರುವುದರಿಂದಲೇ ಮಾಹಿತಿ ನೀಡುತ್ತಿಲ್ಲ. ಇದು ಭ್ರಷ್ಟಾಚಾರ ನಡೆದಿದೆ ಎನ್ನುವ ಅನುಮಾನವನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಕಾಮಗಾರಿಯ ತಾಂತ್ರಿಕ ಗುಣಮಟ್ಟ, ವೆಚ್ಚ, ಟೆಂಡರ್ ಪ್ರಕ್ರಿಯೆ, ನಿರ್ವಹಣೆ ಹಾಗೂ ಸಂಬಂಧಿತ ಎಲ್ಲಾ ಅಂಶಗಳನ್ನು ಪರಿಶೀಲಿಸಲು ವಿಶೇಷ ತನಿಖಾ ಸಮಿತಿ ರಚಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಕೈಗೊಂಡ ಕ್ರಮದ ವಿವರವನ್ನು ಲಿಖಿತವಾಗಿ ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಒಂದು ವೇಳೆ ಈ ದೂರಿನ ಮೇಲೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ರಾಜ್ಯ ಸರ್ಕಾರ ಹಾಗೂ ಮೇಲಧಿಕಾರಿಗಳ ಮಟ್ಟದಲ್ಲಿ ದೂರು ಸಲ್ಲಿಸುವುದಾಗಿ ಸೋಮೇಶ್ವರ ನಾಯ್ಕ ಎಚ್ಚರಿಕೆ ನೀಡಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share