ಕುಮಟಾ: ಜನರ ಸಮಸ್ಯೆಗಳನ್ನು ಕೇಳುವುದಷ್ಟೇ ಅಲ್ಲ, ಅವುಗಳಿಗೆ ಕಾಲಮಿತಿಯೊಳಗೆ ಪರಿಹಾರ ನೀಡಬೇಕು. ‘ಪ್ರಜಾಸೇವೆ’ ಆಂದೋಲನದಡಿ ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳನ್ನು ಗರಿಷ್ಠ 15 ದಿನಗಳೊಳಗೆ ವಿಲೇವಾರಿ ಮಾಡಬೇಕು ಎಂದು ಸಹಕಾರ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಕುಮಟಾ ತಾಲ್ಲೂಕಿನ ದೀವಗಿಯ ಹಾಲಕ್ಕಿ ಸಮುದಾಯ ಭವನದಲ್ಲಿ ನಡೆದ ತಾಲೂಕು ಮಟ್ಟದ ‘ಪ್ರಜಾಸೇವಾ ಆಂದೋಲನ’ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾವು ಜನರ ಸೇವಕರು ಎಂಬ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ ಜಿಲ್ಲೆಯ ಹೋಬಳಿ ಮಟ್ಟಕ್ಕೂ ಸಚಿವರು ಹಾಗೂ ಉನ್ನತಾಧಿಕಾರಿಗಳು ತೆರಳಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸ್ವೀಕರಿಸುವ ಅರ್ಜಿಗಳು ಹಾಗೂ ಕುಂದುಕೊರತೆಗಳನ್ನು 15 ದಿನಗಳೊಳಗೆ ಪರಿಹರಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ಪರಿಹರಿಸಲು ಸಾಧ್ಯವಾಗದ ಅರ್ಜಿಗಳಿದ್ದರೆ, ಅದರ ಸೂಕ್ತ ಕಾರಣವನ್ನು ತಿಳಿಸಿ ಅರ್ಜಿದಾರರಿಗೆ ಹಿಂಬರಹ ನೀಡಬೇಕು. ಯಾವುದೇ ನೆಪ ಹೇಳಿ ಅರ್ಜಿಗಳನ್ನು ಬಾಕಿ ಉಳಿಸಿಕೊಂಡು ಕಾಲಹರಣ ಮಾಡುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸಚಿವರು ಎಚ್ಚರಿಸಿದರು.
ಸಭೆಯಲ್ಲಿ ಮಾತನಾಡಿದ ಕುಮಟಾ ಶಾಸಕ ದಿನಕರ ಕೆ. ಶೆಟ್ಟಿ, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಈಗಾಗಲೇ ಎರಡು ಪ್ರಜಾಸೇವಾ ಆಂದೋಲನಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದೀಗ ಜಿಲ್ಲಾ ಮಟ್ಟದಲ್ಲಿಯೂ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದರು.
ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಹಕ್ಕುಪತ್ರ ದೊರೆಯದೆ ಮನೆ ನಿರ್ಮಿಸಿಕೊಳ್ಳಲು ತೊಂದರೆಯಾಗುತ್ತಿದೆ. ಜಿಪಿಎಸ್ ಸರ್ವೆ ನಡೆದಿದ್ದರೂ ಮನೆ ಅಥವಾ ಕೊಟ್ಟಿಗೆ ನಿರ್ಮಿಸಲು ಸಾಧ್ಯವಾಗದ ಕುಟುಂಬಗಳ ಸಮಸ್ಯೆಯನ್ನು ಪರಿಹರಿಸಲು ಸಚಿವ ಸಂಪುಟದಲ್ಲಿ ಚರ್ಚಿಸಿ, 3ರಿಂದ 5 ಗುಂಟೆ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಸಚಿವರಲ್ಲಿ ಶಾಸಕ ದಿನಕರ ಕೆ. ಶೆಟ್ಟಿ ಮನವಿ ಮಾಡಿದರು.
ಅದೇ ರೀತಿ ಕುಮಟಾ, ಭಟ್ಕಳ, ಹೊನ್ನಾವರ, ಅಂಕೋಲಾ ಹಾಗೂ ಕಾರವಾರ ತಾಲ್ಲೂಕುಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ವಾಯುವ್ಯ ಕರ್ನಾಟಕ ಸಾರಿಗೆ ಸಬ್‌ಡಿವಿಷನ್ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು. ಜೊತೆಗೆ ಕಿರಿದಾಗಿರುವ ಗೋಕರ್ಣ ರಸ್ತೆಯನ್ನು ಅಗಲೀಕರಣಗೊಳಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು 412 ಅರ್ಜಿಗಳನ್ನು ಸ್ವೀಕರಿಸಲಾಯಿತು. ಅರಣ್ಯ ಹಾಗೂ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳು ಮತ್ತು ಜಾಬ್ ಕಾರ್ಡ್‌ಗಳನ್ನು ವಿತರಿಸಲಾಯಿತು. ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೀಮಿತ ಅವಧಿಯಲ್ಲಿ ಬಗೆಹರಿಸುವಂತೆ ಸಚಿವರು ಸೂಚಿಸಿದರು. ಈ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಭೆ ನಡೆಸುವಂತೆಯೂ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್ ಸಿ.ಕೆ., ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಎ.ಎಸ್ಪಿ ರಾನು ಗುಪ್ತ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಗೌಡ, ಮಾಜಿ ಶಾಸಕಿ ಶಾರದಾ ಶೆಟ್ಟಿ, ತಹಸೀಲ್ದಾರ್ ಕೃಷ್ಣ ಕಾಮಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.