ಅಂಕೋಲಾ: ತೋಟದ ಕೆಲಸ ಮಾಡಿಕೊಂಡು ಮಾಲೀಕರ ಮನೆಯಲ್ಲೇ ಉಳಿದುಕೊಂಡಿದ್ದ ವ್ಯಕ್ತಿಯೊಬ್ಬರು ಕೊಳೆನಾಶಕ ಔಷಧಿಯನ್ನು ಸೇವಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ಹಳವಳ್ಳಿಯಲ್ಲಿ ನಡೆದಿದೆ.
ಗದಗ ಮೂಲದ ಹಾಗೂ ಹಾಲಿ ಹಳವಳ್ಳಿಯಲ್ಲಿ ವಾಸವಾಗಿದ್ದ ಮಂಜುನಾಥ ದುರ್ಗಪ್ಪ ಕಲಾಲ್ (38) ಮೃತಪಟ್ಟವರು. ಇವರು ಶಯನ ಸುರೇಶ ನಾಯ್ಕ ಅವರ ತೋಟದಲ್ಲಿ ಕೆಲಸ ಮಾಡಿಕೊಂಡು, ಅವರ ಮನೆಯಲ್ಲೇ ವಾಸವಾಗಿದ್ದರು.
ಸೆ.16ರ ರಾತ್ರಿ ಸುಮಾರು 8.45ರ ವೇಳೆಗೆ ಮಂಜುನಾಥ ಅವರು ತಾವು ಉಳಿದುಕೊಂಡಿದ್ದ ಕೋಣೆಯಲ್ಲಿ ಯಾವುದೋ ಕಳೆನಾಶಕ ಔಷಧಿಯನ್ನು ಸಾರಾಯಿಯಲ್ಲಿ ಬೆರೆಸಿ ಸೇವಿಸಿದ್ದರು ಎನ್ನಲಾಗಿದೆ. ವಿಷಯ ತಿಳಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ.19ರಂದು ಬೆಳಗಿನ ಜಾವ 4.35ರ ಸುಮಾರಿಗೆ ಮಂಜುನಾಥ ಮೃತಪಟ್ಟಿದ್ದಾರೆ. ಅವರ ಸಾವಿನ ಹಿಂದೆ ಹೆಂಡತಿಯೊಂದಿಗಿನ ಕೌಟುಂಬಿಕ ಜಗಳ ಅಥವಾ ಬೇರೆ ಯಾವುದಾದರೂ ಕಾರಣ ಇರಬಹುದೆಂದು ಶಯನ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಶಯನ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.