Saturday, September 19, 2026
Join WhatsApp Group
HomeCrime6 ಬಾರಿ ಶಿಕ್ಷೆ ಅನುಭವಿಸಿದರೂ ಬುದ್ಧಿ ಕಲಿಯದ ಕಳ್ಳ!

6 ಬಾರಿ ಶಿಕ್ಷೆ ಅನುಭವಿಸಿದರೂ ಬುದ್ಧಿ ಕಲಿಯದ ಕಳ್ಳ!

ಮತ್ತೆ ಬಂಧನ; 10.42 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ

ಗೋಕರ್ಣ: ಹಲವು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಗೋಕರ್ಣ ಪೊಲೀಸರು ಬಂಧಿಸಿದ್ದು, ಆತನಿಂದ 10.42 ಲಕ್ಷ ರೂ ಮೌಲ್ಯದ 69 ಗ್ರಾಂ ಚಿನ್ನಾಭರಣ, ನಾಲ್ಕು ಮೊಬೈಲ್ ಸೇರಿ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಸುಮಾರು 87 ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಆರೋಪಿತನ ಪತ್ತೆಗಾಗಿ ಗೋಕರ್ಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ್ ಎಸ್.ಆರ್. ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಭಟ್ಕಳ ತಾಲೂಕಿನ ಹೆಬಳೆ, ಗಾಂಧಿನಗರ ನಿವಾಸಿ ಪರಮೇಶ್ವರ ಮಾದೇವ ನಾಯ್ಕ (46) ಎಂಬಾತನನ್ನು ಸೆ.16ರಂದು ಗೋಕರ್ಣದಲ್ಲಿ ವಶಕ್ಕೆ ಪಡೆದಿದ್ದಾರೆ.

ತನಿಖೆ ವೇಳೆ ಆರೋಪಿತನಿಂದ ಕಳ್ಳತನಕ್ಕೆ ಸಂಬಂಧಿಸಿದ ಸುಮಾರು 10,42,000 ರೂ ಮೌಲ್ಯದ 69 ಗ್ರಾಂ ಬಂಗಾರದ ಆಭರಣಗಳು, ನಾಲ್ಕು ಮೊಬೈಲ್ ಸೆಟ್‌ಗಳು ಹಾಗೂ ಇತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಮೇಶ್ವರ ನಾಯ್ಕ 2003ರಿಂದ ಹಲವಾರು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈ ಪೈಕಿ 6 ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರೋಪಿತನ ಪತ್ತೆ ಕಾರ್ಯಾಚರಣೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾನು ಗುಪ್ತಾ ಅವರ ಮಾರ್ಗದರ್ಶನದಲ್ಲಿ ಗೋಕರ್ಣ ಪಿಐ ಶ್ರೀಧರ್ ಎಸ್.ಆರ್. ನೇತೃತ್ವದ ತಂಡ ಕಾರ್ಯನಿರ್ವಹಿಸಿತು.

ಪಿಎಸ್‌ಐಗಳಾದ ಸುನಿಲ್ ಎಂ.ಎ., ಅನಿಲ್ ಬಿ.ಎಂ. ಸೇರಿದಂತೆ ಪೊಲೀಸ್ ಸಿಬ್ಬಂದಿಗಳಾದ ರಾಜೇಶ್ ಎಚ್. ನಾಯ್ಕ, ವಸಂತ್ ನಾಯ್ಕ, ಗೋರಖನಾಥ ರಾಣೆ, ಶ್ರೀಕಾಂತ್ ಕಟಬರ, ಪರಮೇಶ್ವರ ಬೆಂಡಗಟ್ಟಿ, ಶ್ರವಣಕುಮಾರ, ಸಂತೋಷ ಮಳೆಗೌಡರ್, ಮಣಿಕಂಠ ಗೌಡ ಹಾಗೂ ಮದನ ನಾಯ್ಕ, ಅಂಕೋಲಾ ಪೊಲೀಸ್ ಠಾಣೆಯ ಮಹಮ್ಮದ್ ಶಫಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ಸಿಬ್ಬಂದಿಗಳಾದ ಬಬನ್ ಕದಂ, ಉದಯ ಗುನಗಾ ಮತ್ತು ಮಹಾಲಿಂಗ ಸಾವಳಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share