Monday, September 7, 2026
Join WhatsApp Group
HomeLocal Storyಮತ್ತೆ ಕುದಿಯುತ್ತಿದೆ ಪಶ್ಚಿಮ ಘಟ್ಟ!

ಮತ್ತೆ ಕುದಿಯುತ್ತಿದೆ ಪಶ್ಚಿಮ ಘಟ್ಟ!

ಉತ್ತರ ಕನ್ನಡದ 556 ಗ್ರಾಮಗಳು ಪರಿಸರ ಸೂಕ್ಷ್ಮ ವಲಯದ ಕರಡು ಪಟ್ಟಿಯಲ್ಲಿ

ಕೆನರಾ ನೆಕ್ಸ್ಟ್‌ ನ್ಯೂಸ್‌ ಡೆಸ್ಕ್‌

ಕಾರವಾರ: ಸುಮಾರು ಒಂದು ದಶಕದಿಂದ ದೇಶದ ಪರಿಸರ ಹಾಗೂ ಅಭಿವೃದ್ಧಿ ಚರ್ಚೆಯ ಕೇಂದ್ರಬಿಂದುವಾಗಿರುವ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ (Ecologically Sensitive Area-ESA) ವಿವಾದ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಏಳನೇ ಕರಡು ಅಧಿಸೂಚನೆ ಪ್ರಕಟಿಸಿದ್ದು, ಕರ್ನಾಟಕದ ಪಶ್ಚಿಮ ಘಟ್ಟ ವ್ಯಾಪ್ತಿಯ ಸಾವಿರಾರು ಗ್ರಾಮಗಳು ಮತ್ತೊಮ್ಮೆ ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಉತ್ತರ ಕನ್ನಡ ಜಿಲ್ಲೆಯ 556 ಗ್ರಾಮಗಳು ಈ ಕರಡು ಪಟ್ಟಿಯಲ್ಲಿರುವುದು ಜಿಲ್ಲೆಯ ರೈತರು, ತೋಟಗಾರರು, ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಆದರೆ ಒಂದು ಸಂಗತಿ ಸ್ಪಷ್ಟ, ಇದು ಅಂತಿಮ ಅಧಿಸೂಚನೆಯಲ್ಲ. ಸಾರ್ವಜನಿಕರು ಹಾಗೂ ಸ್ಥಳೀಯ ಸಂಸ್ಥೆಗಳು 60 ದಿನಗಳೊಳಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಬಹುದು.

ಈ ಕರಡು ಅಧಿಸೂಚನೆ ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲಿದ್ದು, ಒಟ್ಟು 56,825 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವಾಗಿ ಗುರುತಿಸುವ ಪ್ರಸ್ತಾಪ ಹೊಂದಿದೆ. ಕಳೆದ 2014ರಿಂದಲೂ ಕೇಂದ್ರ ಸರ್ಕಾರ ಆರು ಬಾರಿ ಕರಡು ಅಧಿಸೂಚನೆ ಹೊರಡಿಸಿದ್ದರೂ ರಾಜ್ಯಗಳೊಂದಿಗೆ ಒಮ್ಮತ ಮೂಡದ ಕಾರಣ ಅಂತಿಮ ಅಧಿಸೂಚನೆ ಹೊರಬಂದಿರಲಿಲ್ಲ. ಇದೀಗ ಏಳನೇ ಕರಡು ಪ್ರಕಟವಾಗಿದ್ದು, ಮತ್ತೊಮ್ಮೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

ಕರಡು ಅಧಿಸೂಚನೆಯಲ್ಲಿ ಉತ್ತರ ಕನ್ನಡದ 556, ಶಿವಮೊಗ್ಗದ 446, ಚಿಕ್ಕಮಗಳೂರಿನ 137, ಕೊಡಗಿನ 53, ದಕ್ಷಿಣ ಕನ್ನಡದ 43 ಹಾಗೂ ಉಡುಪಿಯ 34 ಗ್ರಾಮಗಳು ಸೇರಿವೆ ಎಂದು ಪ್ರಕಟಿತ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳ ಪಶ್ಚಿಮ ಘಟ್ಟ ವ್ಯಾಪ್ತಿಯ ಗ್ರಾಮಗಳು ಈ ಪಟ್ಟಿಯಲ್ಲಿರುವುದರಿಂದ ಜಿಲ್ಲೆಯ ಜನರಲ್ಲಿ ಸಹಜವಾಗಿಯೇ ಆತಂಕ ಮೂಡಿದೆ. ಆದರೆ ತಜ್ಞರು ಹೇಳುವಂತೆ, ಪಟ್ಟಿಯಲ್ಲಿ ಹೆಸರು ಬಂದ ತಕ್ಷಣ ಯಾವುದೇ ನಿರ್ಬಂಧಗಳು ಜಾರಿಯಾಗುವುದಿಲ್ಲ. ಅಂತಿಮ ಅಧಿಸೂಚನೆ ಪ್ರಕಟವಾದ ಬಳಿಕವೇ ಅದರ ಪರಿಣಾಮಗಳು ಸ್ಪಷ್ಟವಾಗಲಿವೆ.

ಈಗಾಗಲೇ ನಡೆಯುತ್ತಿರುವ ಕೃಷಿ, ತೋಟಗಾರಿಕೆ, ಮನೆಗಳ ದುರಸ್ತಿ ಸೇರಿದಂತೆ ಸಾಮಾನ್ಯ ಜೀವನೋಪಾಯ ಚಟುವಟಿಕೆಗಳಿಗೆ ಅವಕಾಶ ಮುಂದುವರಿಯಲಿದೆ ಎಂದು ಕರಡು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಮುಖ್ಯವಾಗಿ ಹೊಸ ಗಣಿಗಾರಿಕೆ, ಕ್ವಾರಿ, ಮರಳು ಗಣಿಗಾರಿಕೆ, ಪರಿಸರಕ್ಕೆ ಹಾನಿಕಾರಕ ‘ರೆಡ್’ ವರ್ಗದ ಕೈಗಾರಿಕೆಗಳು ಹಾಗೂ ಕೆಲವು ದೊಡ್ಡ ನಿರ್ಮಾಣ ಚಟುವಟಿಕೆಗಳ ಮೇಲೆ ನಿರ್ಬಂಧ ಅಥವಾ ನಿಯಂತ್ರಣ ವಿಧಿಸುವ ಪ್ರಸ್ತಾಪವಿದೆ.

ಆಕ್ಷೇಪಣೆ ಸಲ್ಲಿಸಲು ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ 60 ದಿನಗಳ ಗಡುವಿದ್ದು, ಲಿಖಿತ ರೂಪದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿಗೆ ಕಳುಹಿಸಬಹುದಾಗಿದೆ. esz-mef@nic.in ಇ-ಮೇಲ್ ವಿಳಾಸಕ್ಕೂ ಅಭಿಪ್ರಾಯ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಂತಿಮ ಅಧಿಸೂಚನೆ ಹೊರಬರುವ ಮೊದಲು ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡುವುದಾಗಿ ಸಚಿವಾಲಯ ತಿಳಿಸಿದೆ.

ಉತ್ತರ ಕನ್ನಡ ಜಿಲ್ಲೆಯ ದೃಷ್ಟಿಯಿಂದ ಈ ಬೆಳವಣಿಗೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾಗಿರುವ ಅಡಕೆ, ಮೆಣಸು, ತೆಂಗು, ಕಾಫಿ, ಕೃಷಿ ಹಾಗೂ ಅರಣ್ಯಾಧಾರಿತ ಬದುಕಿನೊಂದಿಗೆ ಪಶ್ಚಿಮ ಘಟ್ಟ ನೇರ ಸಂಬಂಧ ಹೊಂದಿದೆ. ಪರಿಸರ ಸಂರಕ್ಷಣೆ ಮತ್ತು ಜನಜೀವನದ ನಡುವೆ ಸಮತೋಲನ ಸಾಧಿಸುವ ಅಂತಿಮ ನಿರ್ಧಾರ ಯಾವ ರೂಪ ಪಡೆಯುತ್ತದೆ ಎಂಬುದು ಮುಂದಿನ ಎರಡು ತಿಂಗಳಲ್ಲಿ ಸಾರ್ವಜನಿಕರಿಂದ ಬರುವ ಪ್ರತಿಕ್ರಿಯೆಗಳ ಮೇಲೂ ಅವಲಂಬಿತವಾಗಿರಲಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share