ಯಲ್ಲಾಪುರ: ಬಸ್ ಏರಲು ಬಂದವರ ನಡುವೆ ಗಾಂಜಾ ಅಮಲಿನಲ್ಲೇ ತೂರಾಡುತ್ತಿದ್ದ ಯುವಕನೊಬ್ಬ ಯಲ್ಲಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವೈದ್ಯಕೀಯ ಪರೀಕ್ಷೆಯಲ್ಲೂ ಗಾಂಜಾ ಸೇವನೆ ದೃಢಪಟ್ಟಿದ್ದು, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಂಧಿತನನ್ನು ಭಟ್ಕಳ ತಾಲೂಕಿನ ಬೆಳಖಂಡ ಸಮೀಪದ ಮುಟ್ಟಳ್ಳಿಯ ಬದ್ರುದ್ದೀನ ಅಮಾನ ಮಹಮ್ಮದ್ ಹುಸೇನ್ ಸಯ್ಯದ್ (20) ಎಂದು ಗುರುತಿಸಲಾಗಿದೆ. ಆತ ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 31ರಂದು ಸಂಜೆ ಸುಮಾರು 4.30ರ ವೇಳೆಗೆ ಯಲ್ಲಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಯುವಕ ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗಾಂಜಾ ಸೇವಿಸಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ವೈದ್ಯಾಧಿಕಾರಿಗಳು ನೀಡಿದ ವರದಿಯಲ್ಲಿ ಗಾಂಜಾ ಸೇವನೆ ‘ಪಾಸಿಟಿವ್’ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ, ಯಲ್ಲಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಜಶೇಖರ ವಂದಲಿ ಅವರು ನೀಡಿದ ದೂರಿನ ಮೇರೆಗೆ ಎನ್ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.