ಕಾರವಾರ: ದೇವರ ಪೂಜೆಗಾಗಿ ಹೂವು ಕೀಳಲು ತೆರಳಿದ್ದ ವೇಳೆ ಹಾವು ಕಚ್ಚಿ ಕೂಲಿ ಕಾರ್ಮಿಕನೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕಾರವಾರದ ಕೋಡಿಬಾಗ ಜನಾಬಾಗದಲ್ಲಿ ನಡೆದಿದೆ.
ಮೃತರನ್ನು ಲಕ್ಕಪ್ಪ ಹನುಮಂತ ಗಮಜಿ (41) ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಪನಗುಟ್ಟಿ-ಗುಟಗುದ್ದಿ ಗ್ರಾಮದ ನಿವಾಸಿಯಾಗಿದ್ದ ಅವರು, ಪ್ರಸ್ತುತ ಕಾರವಾರದ ಕೋಡಿಬಾಗ ಜನಾಬಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಗೌಂಡಿ ಕೆಲಸ ಮಾಡಿಕೊಂಡಿದ್ದರು.
ಜುಲೈ 31ರಂದು ಬೆಳಿಗ್ಗೆ ಸುಮಾರು 8.15ಕ್ಕೆ ಮನೆಯ ಸಮೀಪದ ತೋಟದಲ್ಲಿ ದೇವರ ಪೂಜೆಗಾಗಿ ಹೂವು ಕೀಳುತ್ತಿದ್ದ ವೇಳೆ, ಗುರುತು ಪತ್ತೆಯಾಗದ ಕಾಡು ಜಾತಿಯ ಹಾವು ಅವರ ಬಲಪಾದಕ್ಕೆ ಕಚ್ಚಿದೆ. ತಕ್ಷಣ ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 1ರಂದು ಮುಂಜಾನೆ 2.23ಕ್ಕೆ ಮೃತಪಟ್ಟಿದ್ದಾರೆ.
ಮೃತರ ಪತ್ನಿ ಭಾರತಿ ಗಮಜಿ ನೀಡಿದ ದೂರಿನ ಮೇರೆಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.