Monday, September 7, 2026
Join WhatsApp Group
HomeLocal Newsಗಿಡ ನೆಡುವುದೇ ಪ್ರಕೃತಿಯ ಮೇಲಿನ ದೌರ್ಜನ್ಯ!

ಗಿಡ ನೆಡುವುದೇ ಪ್ರಕೃತಿಯ ಮೇಲಿನ ದೌರ್ಜನ್ಯ!

ಪರಿಸರ ಹೋರಾಟಗಾರ ಅಖಿಲೇಶ ಚಿಪ್ಪಲಿ ಹೀಗೆ ಹೇಳಿದ್ದೇಕೆ?!

ಹೊನ್ನಾವರ: ಗಿಡ ನೆಡುವುದು ಪ್ರಕೃತಿ ಸಂರಕ್ಷಣೆ ಅಲ್ಲ, ಅದು ಪ್ರಕೃತಿಯ ಮೇಲಿನ ಮಾನವನ ದೌರ್ಜನ್ಯ ಎಂಬ ಅಚ್ಚರಿಯ ಹೇಳಿಕೆಯನ್ನು ಪರಿಸರ ಹೋರಾಟಗಾರ ಅಖಿಲೇಶ ಚಿಪ್ಪಲಿ ಹೇಳಿದ್ದಾರೆ.

ಹೊನ್ನಾವರದ ಬಂಗಾರಮಕ್ಕಿಯಲ್ಲಿ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ‘ಪಶ್ಚಿಮ ಘಟ್ಟ ಸಂರಕ್ಷಣಾ ಚಾತುರ್ಮಾಸ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿಯಲ್ಲಿ ಗಿಡಗಳನ್ನು ನೆಡುವ ಕೆಲಸವನ್ನು ವನ್ಯಜೀವಿಗಳೇ ಸಮರ್ಥವಾಗಿ ನಿರ್ವಹಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

ಮುಂಗಟ್ಟೆ, ಕಬ್ಬೆಕ್ಕು ಸೇರಿದಂತೆ ಹಲವು ಪ್ರಾಣಿಗಳು ಉತ್ತಮ ಹಣ್ಣುಗಳನ್ನು ತಿಂದು ಬೀಜಗಳನ್ನು ಹರಡುವ ಮೂಲಕ ಸಹಜವಾಗಿ ಅರಣ್ಯ ವಿಸ್ತರಣೆ ಮಾಡುತ್ತವೆ. ಅವು ಬಿತ್ತಿದ ಶೇ.99ರಷ್ಟು ಬೀಜಗಳು ಮರಗಳಾಗಿ ಬೆಳೆಯುತ್ತವೆ. ಆದರೆ ಮನುಷ್ಯ ನೆಡುವ ಗಿಡಗಳಲ್ಲಿ ಬಹುಪಾಲು ಬದುಕುವುದೇ ಇಲ್ಲ. ಗಿಡ ನೆಡುವ ಹೆಸರಿನಲ್ಲಿ ಪ್ಲಾಸ್ಟಿಕ್ ಬಳಕೆ, ಮಣ್ಣು-ಮರಳು ಮಿಶ್ರಣ, ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಮೂಲಕ ಪ್ರಕೃತಿಯ ಮೇಲೆಯೇ ದೌರ್ಜನ್ಯ ನಡೆಯುತ್ತಿದೆ ಎಂದು ಅವರು ಟೀಕಿಸಿದರು.

ಪಶ್ಚಿಮ ಘಟ್ಟದ ಸಂರಕ್ಷಣೆ ಕುರಿತು ಮಾತನಾಡಿದ ಅವರು, ಪ್ರಕೃತಿಗೆ ನಮ್ಮ ಅಗತ್ಯವಿಲ್ಲ. ನಮಗೆ ಪ್ರಕೃತಿಯ ಅಗತ್ಯವಿದೆ. ರೈತರು ಉಳಿಯಬೇಕಾದರೆ ಕಾಡು ಉಳಿಯಬೇಕು. ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ನೀರು ಕೊಡುವುದೇ ನಿಜವಾದ ಆಸ್ತಿ ಎಂದು ಹೇಳಿದರು.

ಕಸ್ತೂರಿ ರಂಗನ್ ಹಾಗೂ ಮಾಧವ ಗಾಡ್ಗೀಳ್ ವರದಿಗಳ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಗಳನ್ನು ಹರಡಲಾಗಿದೆ ಎಂದು ಆರೋಪಿಸಿದ ಅವರು, ವರದಿಗಳನ್ನು ಓದದೇ ವಿರೋಧಿಸುವುದು ಸರಿಯಲ್ಲ. ಅಡಿಕೆ ಹಾಗೂ ಕಾಫಿ ಬೆಳೆಗಳಿಗೆ ಅಗತ್ಯವಾದ ಬೋರ್ಡೊ ಮಿಶ್ರಣ ಬಳಸಲು ಕೂಡ ವರದಿಯಲ್ಲಿ ಅವಕಾಶವಿದೆ ಎಂದು ತಿಳಿಸಿದರು.

ಶರಾವತಿ ನದಿ, ಪಶ್ಚಿಮ ಘಟ್ಟ ಹಾಗೂ ಪರಿಸರಕ್ಕೆ ಸಂಬಂಧಿಸಿದ ಹಲವು ಯೋಜನೆಗಳ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸಲಾಗಿದೆ. ಪಶ್ಚಿಮ ಘಟ್ಟ ಉಳಿದರೆ ಮಾತ್ರ ದಕ್ಷಿಣ ಭಾರತದ ಭವಿಷ್ಯ ಸುರಕ್ಷಿತವಾಗಿರಲಿದೆ ಎಂದು ಎಚ್ಚರಿಸಿದರು.

ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟವನ್ನು ಹಾಳು ಮಾಡಲಾಗುತ್ತಿದೆ. ಕಾಡು, ಜೀವ ವೈವಿಧ್ಯ ಹಾಗೂ ಜಲಸಂಪನ್ಮೂಲಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share