ಕಂಪೌಂಡ್ ಕುಸಿದು 2 ಲಕ್ಷ ರೂ ನಷ್ಟ
ಅಂಕೋಲಾ: ನೆರೆಯ ಜಮೀನಿನ ಬಳಿ ಭಾರೀ ಪ್ರಮಾಣದಲ್ಲಿ ಮಣ್ಣು ಸುರಿದು ಕಂಪೌಂಡ್ ಗೋಡೆ ಕುಸಿಯುವಂತೆ ಮಾಡಿದ್ದಲ್ಲದೆ, ತೋಟಕ್ಕೂ ಸುಮಾರು 2 ಲಕ್ಷ ರೂ ನಷ್ಟ ಉಂಟುಮಾಡಿರುವ ಆರೋಪದ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.
ಅಂಕೋಲಾ ತಾಲೂಕಿನ ಮಾದನಗೇರಿ-ಬಳಲೆ ನಿವಾಸಿ, ನಿವೃತ್ತ ನೌಕರ ರವಿ ಎನ್.ನಾಯಕ (69) ಅವರು ನೀಡಿದ ದೂರಿನ ಮೇರೆಗೆ, ಹಿರೇಗುತ್ತಿ ನಿವಾಸಿ ಗಜು ನಾಯಕ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರವಿ ಎನ್.ನಾಯಕ ಅವರ ಅತ್ತೆ ಸರಸ್ವತಿ ಕೃಷ್ಣ ನಾಯಕ ಅವರಿಗೆ ಸೇರಿದ ಸರ್ವೆ ನಂ. 140ರ ಜಮೀನಿಗೆ ಹೊಂದಿಕೊಂಡಿರುವ ತನ್ನ ಜಮೀನಿನಲ್ಲಿ ಆರೋಪಿ ಗಜು ನಾಯಕ ಸುಮಾರು 100 ಲಾರಿ ಲೋಡ್ ಬಿಳಿ ಶೇಡಿ ಮಣ್ಣನ್ನು ಸುರಿದಿದ್ದಾರೆ.
ಈ ಮಣ್ಣನ್ನು ದೂರುದಾರರ ಅತ್ತೆಯವರ ಕಂಪೌಂಡ್ ಗೋಡೆಗೆ ಹಾನಿಯಾಗುವ ರೀತಿಯಲ್ಲಿ ಹಾಕಿದ್ದರಿಂದ ಗೋಡೆ ಕುಸಿದಿದ್ದು, ಮಳೆಯ ವೇಳೆ ಮಣ್ಣು ಮತ್ತು ನೀರು ತೋಟ ಹಾಗೂ ಮನೆಯ ಆವರಣಕ್ಕೆ ಹರಿದು ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಘಟನೆಯಿಂದ ತೋಟಕ್ಕೆ ಸುಮಾರು ₹2 ಲಕ್ಷ ಮೌಲ್ಯದ ನಷ್ಟ ಸಂಭವಿಸಿದ್ದು, ಆರೋಪಿಯು ದಬ್ಬಾಳಿಕೆ ಹಾಗೂ ದೌರ್ಜನ್ಯ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.