ಕಾರವಾರ: ಸಚಿವ ಸ್ಥಾನ ಸಿಗದಿರುವ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಸಂಪೂರ್ಣ ಸಹಕಾರವಿದ್ದು, ಕಾರವಾರದ ಅಭಿವೃದ್ಧಿಗಾಗಿ ನಾನು ಮುಖ್ಯಮಂತ್ರಿಯಂತೆಯೇ ಕೆಲಸ ಮಾಡುತ್ತಿದ್ದೇನೆ ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಗಮನ ಸಚಿವ ಸ್ಥಾನಕ್ಕಿಂತ ಕ್ಷೇತ್ರದ ಅಭಿವೃದ್ಧಿಯ ಮೇಲೆಯೇ ಇದೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ಷೇತ್ರದ ಅಗತ್ಯ ಯೋಜನೆಗಳಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಕಾರವಾರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಕೊರತೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಹಲವು ಮೂಲಸೌಕರ್ಯ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ದೊರೆತಿದ್ದು, ಬೆಳೇಕೇರಿ–ಹಾರವಾಡ ಸಂಪರ್ಕ ಸೇತುವೆ ನಿರ್ಮಾಣಕ್ಕೆ ₹30 ಕೋಟಿ ಮಂಜೂರಾಗಿದೆ. ಈ ಯೋಜನೆಯಿಂದ ಕರಾವಳಿ ಭಾಗದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಣೆಯಾಗಲಿದೆ ಎಂದು ಹೇಳಿದರು.
ಹಾರವಾಡ ಸರ್ಕಾರಿ ಶಾಲೆಯ ದುರಸ್ತಿಗೆ 30 ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಅಗತ್ಯವಿದ್ದರೆ ಹೆಚ್ಚುವರಿ ಹಣವನ್ನು ಶಾಸಕರ ನಿಧಿಯಿಂದಲೇ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಕೈಗಾ ಯೋಜನೆಗೆ ಸಂಬಂಧಿಸಿದ ಭಾರೀ ಯಂತ್ರಗಳ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಡಿವೈಡರ್ ತೆರವುಗೊಳಿಸಿರುವುದನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿ ಯೋಜನೆಗಳಲ್ಲಿ ದೂರದೃಷ್ಟಿಯೊಂದಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಿರಾಶ್ರಿತರ ಕಾಲನಿಯ ರಸ್ತೆ ಹಾಗೂ ಸೇತುವೆ ಮರುನಿರ್ಮಾಣಕ್ಕೂ ಅಗತ್ಯ ಪ್ರಸ್ತಾವನೆ ಸಿದ್ಧವಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಸೈಲ್, ಕಾರವಾರ ಕ್ಷೇತ್ರಕ್ಕೆ ಹಿಂದಿನ ಸರ್ಕಾರದ ಅವಧಿಗಿಂತ ಹೆಚ್ಚಿನ ಅನುದಾನ ತರುವ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಆರೋಪ ಮಾಡುವವರು ದಾಖಲೆಗಳೊಂದಿಗೆ ಸಾರ್ವಜನಿಕವಾಗಿ ಚರ್ಚೆಗೆ ಬರಬಹುದು ಎಂದು ಸವಾಲು ಹಾಕಿದರು.
ಹೊಸ ಅಧಿಕಾರಿಗಳು ಕ್ಷೇತ್ರದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ಆದರೆ ಜನರ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ರಾಜಿ ಇರುವುದಿಲ್ಲ ಎಂದು ಅವರು ಹೇಳಿದರು.