ಮೂತ್ರ ವಿಸರ್ಜನೆಗೆ ಹೋದ ಮಹಿಳೆಗೆ ಹಾವು ಕಚ್ಚಿ ದುರ್ಮರಣ
ಯಲ್ಲಾಪುರ: ಮನೆಯ ಹಿಂಭಾಗಕ್ಕೆ ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ವಿಷಸರ್ಪ ಕಚ್ಚಿ ಗಂಭೀರವಾಗಿ ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರು ಸುಮಾರು 13 ದಿನಗಳ ಕಾಲ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ ಬಳಿಕ ಮೃತಪಟ್ಟಿರುವ ಘಟನೆ ಯಲ್ಲಾಪುರ ತಾಲೂಕಿನ ಜಮಗುಳಿ ಗ್ರಾಮದಲ್ಲಿ ನಡೆದಿದೆ.
ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಅಂಚೆ ವ್ಯಾಪ್ತಿಯ ಜಮಗುಳಿ ನಿವಾಸಿ ಶಾರದಾ ಪ್ರಕಾಶ ಗಾವಡೆ (52) ಮೃತಪಟ್ಟವರು.
ಜುಲೈ 23ರಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ಶಾರದಾ ಅವರು ಮನೆಯ ಹಿಂಭಾಗಕ್ಕೆ ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ವಿಷಸರ್ಪವು ಅವರ ಬಲಗಾಲಿನ ಹೆಬ್ಬೆರಳು ಹಾಗೂ ಪಕ್ಕದ ಬೆರಳಿಗೆ ಕಚ್ಚಿದೆ.
ತಕ್ಷಣ ಅವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಳಿಯಾಳ ಸರ್ಕಾರಿ ಆಸ್ಪತ್ರೆ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 5ರಂದು ಬೆಳಿಗ್ಗೆ ಸುಮಾರು 11.07ಕ್ಕೆ ಅವರು ಮೃತಪಟ್ಟಿದ್ದಾರೆ.
ಮೃತರ ಪುತ್ರ ಯಶವಂತ ಪ್ರಕಾಶ ಗಾವಡೆ ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.