ಪುತ್ತೂರಿನ ತಿರಂಗಾ ಯಾತ್ರೆಯಲ್ಲಿ ರೂಪಾಲಿ ನಾಯ್ಕ ಭಾಗಿ
ಪುತ್ತೂರು/ಕಾರವಾರ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಶುಕ್ರವಾರ ಆಯೋಜಿಸಲಾದ ಬೃಹತ್ ತಿರಂಗಾಯಾತ್ರೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದ ರಾಜ್ಯ ಸಂಚಾಲಕಿ ರೂಪಾಲಿ ಎಸ್. ನಾಯ್ಕ ಪಾಲ್ಗೊಂಡರು.
ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಆರಂಭವಾದ ತಿರಂಗಾಯಾತ್ರೆ ಪುತ್ತೂರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಿಲ್ಲೇ ಮೈದಾನದ ನಗರಸಭಾ ಭವನದವರೆಗೆ ನಡೆಯಿತು. ಬಳಿಕ ಸಾರ್ವಜನಿಕ ಸಭೆ ಆಯೋಜಿಸಲಾಯಿತು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಹರೀಶ ಪೂಂಜಾ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕಂಪಲ, ಮಾಜಿ ಶಾಸಕ ಸಂಜೀವ ಮಠಂದೂರು, ವಿಭಾಗ ಪ್ರಭಾರಿ ಭಾರತೇಶ್ ಹಾಗೂ ಪುತ್ತೂರು ಮಂಡಲ ಅಧ್ಯಕ್ಷ ಸದಾನಂದ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ಹಾಗೂ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಸಂಘಟನಾ ಪ್ರಭಾರಿಯಾಗಿರುವ ರೂಪಾಲಿ ಎಸ್. ನಾಯ್ಕ ಅವರು ತಿರಂಗಾಯಾತ್ರೆಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಸುರಿಯುತ್ತಿದ್ದ ಮಳೆಯ ನಡುವೆಯೂ ಮಹಿಳೆಯರು, ಯುವಕ-ಯುವತಿಯರು ಸೇರಿದಂತೆ ಸಾವಿರಾರು ಮಂದಿ ತಿರಂಗಾಯಾತ್ರೆಯಲ್ಲಿ ಭಾಗವಹಿಸಿ ರಾಷ್ಟ್ರಧ್ವಜ ಹಿಡಿದು ರಾಷ್ಟ್ರಭಕ್ತಿಯ ಸಂದೇಶ ಸಾರಿದರು. ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಡೆದ ಈ ಬೃಹತ್ ತಿರಂಗಾಯಾತ್ರೆ ಯಶಸ್ವಿಯಾಗಿ ನೆರವೇರಿತು.