Monday, September 7, 2026
Join WhatsApp Group
HomeLocal Newsಮುಂಡಗೋಡ; ಕಳ್ಳರ ಮೇಲೆ ಖಾಕಿ ಕಣ್ಗಾವಲು ಮತ್ತಷ್ಟು ಬಿಗಿ!

ಮುಂಡಗೋಡ; ಕಳ್ಳರ ಮೇಲೆ ಖಾಕಿ ಕಣ್ಗಾವಲು ಮತ್ತಷ್ಟು ಬಿಗಿ!

ಸರಣಿ ಕಳ್ಳತನದ ಬೆನ್ನಲ್ಲೇ ಗಡಿಗಳಲ್ಲಿ ನಾಕಾಬಂದಿ, ಗ್ರಾಮಗಳಲ್ಲೂ ರಾತ್ರಿ ಗಸ್ತು

ಮುಂಡಗೋಡ: ಮನೆ, ಅಂಗಡಿ, ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಒಂದರ ಹಿಂದೆ ಒಂದರಂತೆ ಕಳ್ಳತನ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಮುಂಡಗೋಡ ಪೊಲೀಸರು ಇದೀಗ ಕಣ್ಗಾವಲು ಮತ್ತಷ್ಟು ಬಿಗಿಗೊಳಿಸಿದ್ದಾರೆ.

ಪಟ್ಟಣಕ್ಕೆ ಮಾತ್ರ ಸೀಮಿತವಾಗದೆ ತಾಲೂಕಿನ ಗಡಿ ಭಾಗಗಳು, ಪ್ರಮುಖ ರಸ್ತೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ರಾತ್ರಿ ಗಸ್ತು ಹೆಚ್ಚಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿ-ವಾಹನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಕಳ್ಳತನದ ಸರಣಿ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸಿರುವ ಹೊತ್ತಿನಲ್ಲೇ ಪೊಲೀಸರು ಕೈಗೊಂಡಿರುವ ಈ ಕ್ರಮ ಸಹಜವಾಗಿಯೇ ಗಮನ ಸೆಳೆದಿದೆ.

ಹುಬ್ಬಳ್ಳಿ ರಸ್ತೆಯ ವಡಗಟ್ಟಾ ನಾಕಾ, ಬಂಕಾಪುರ ರಸ್ತೆಯ ಸನವಳ್ಳಿ ನಾಕಾ, ಯಲ್ಲಾಪುರ ರಸ್ತೆಯ ಪ್ರಮುಖ ನಾಕಾ ಹಾಗೂ ಶಿರಸಿ ರಸ್ತೆಯ ಭಾಗಗಳಲ್ಲಿ ಪೊಲೀಸರು ವಿಶೇಷ ನಿಗಾ ವಹಿಸುತ್ತಿದ್ದಾರೆ. ತಾಲೂಕಿನ ಪ್ರಮುಖ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿ ನಾಕಾಬಂದಿ ನಡೆಸಲಾಗುತ್ತಿದ್ದು, ರಾತ್ರಿ ಸಂಚರಿಸುವ ಅನುಮಾನಾಸ್ಪದ ವಾಹನಗಳ ತಪಾಸಣೆಗೂ ಒತ್ತು ನೀಡಲಾಗಿದೆ. ಕಳ್ಳತನ ನಡೆಸಿ ಬೇರೆ ಮಾರ್ಗದ ಮೂಲಕ ಪರಾರಿಯಾಗುವ ಸಾಧ್ಯತೆಯನ್ನು ತಡೆಯುವ ಉದ್ದೇಶದಿಂದ ಗಡಿಭಾಗಗಳ ಮೇಲೂ ವಿಶೇಷ ಗಮನ ಹರಿಸಲಾಗಿದೆ.

ಇದರ ಜತೆಗೆ ಪಟ್ಟಣದ ಹೊರಭಾಗದ ಗ್ರಾಮಗಳಲ್ಲೂ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಅಗತ್ಯವಿರುವ ಕಡೆ ಸ್ಥಳೀಯರ ಸಹಕಾರದೊಂದಿಗೆ ರಾತ್ರಿ ಕಾವಲು ವ್ಯವಸ್ಥೆ ನಡೆಸಲಾಗುತ್ತಿದೆ. ಅಂದರೆ, ಕಳ್ಳತನ ನಡೆದ ಬಳಿಕ ಆರೋಪಿಗಳ ಬೆನ್ನುಹತ್ತುವುದಕ್ಕಿಂತ ಕಳ್ಳತನವೇ ನಡೆಯದಂತೆ ಮುನ್ನೆಚ್ಚರಿಕೆಯ ಕಣ್ಗಾವಲು ಈಗ ಪೊಲೀಸರ ಪ್ರಮುಖ ಆದ್ಯತೆಯಾಗಿದೆ.

ಸರಣಿ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಮುಂಡಗೋಡ ಪಿಐ ರಮೇಶ್ ಹಾನಾಪುರ ಅವರು ವ್ಯಾಪಾರಸ್ಥರಿಗೆ ತಮ್ಮ ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಕಳ್ಳತನದಂತಹ ಪ್ರಕರಣಗಳಲ್ಲಿ ಆರೋಪಿಗಳ ಚಲನವಲನ ಪತ್ತೆಹಚ್ಚಲು ಸಿಸಿಟಿವಿ ದೃಶ್ಯಗಳು ಪ್ರಮುಖ ಸಾಕ್ಷ್ಯವಾಗುವುದರಿಂದ, ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ವ್ಯವಸ್ಥೆ ಅಗತ್ಯವಾಗಿದೆ.

ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ರಸ್ತೆಗಳು, ಪ್ರವೇಶ-ನಿರ್ಗಮನ ಮಾರ್ಗಗಳಲ್ಲೂ ಸಿಸಿಟಿವಿ ಅಳವಡಿಸುವ ಅಗತ್ಯವನ್ನು ಪೊಲೀಸರು ಮುಂದಿಟ್ಟಿದ್ದಾರೆ. ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲೂ ಸಿಸಿಟಿವಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ.

ಸದ್ಯ ಪೊಲೀಸರು ರಾತ್ರಿ ವೇಳೆಯಲ್ಲೂ ತಾಲೂಕಿನ ಪ್ರಮುಖ ಗಡಿಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಾವಲು ಕಾಯುತ್ತಿದ್ದಾರೆ. ಆದರೆ ಅಪರಾಧ ತಡೆ ಕೇವಲ ಪೊಲೀಸರ ಜವಾಬ್ದಾರಿಯಲ್ಲ. ಗ್ರಾಮಸ್ಥರು ಕೂಡ ತಮ್ಮ ಊರಿನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು, ವಾಹನಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.

ರಾತ್ರಿ ವೇಳೆ ಅನಗತ್ಯವಾಗಿ ಓಡಾಡುವವರ ಬಗ್ಗೆ ಎಚ್ಚರಿಕೆ ವಹಿಸುವುದು, ಮನೆ-ಅಂಗಡಿ-ಧಾರ್ಮಿಕ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳುವುದು ಹಾಗೂ ನೆರೆಹೊರೆಯವರೊಂದಿಗೆ ಪರಸ್ಪರ ಸಂಪರ್ಕದಲ್ಲಿರುವುದು ಕೂಡ ಕಳ್ಳತನ ತಡೆಗೆ ನೆರವಾಗಬಹುದು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share