ಶಿರಸಿ: ಗ್ರಾಹಕರ ಖಾತೆಯಿಂದ ನಿಯಮಬಾಹಿರವಾಗಿ ಹಣ ಕಡಿತ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿರಸಿಯ HDFC ಬ್ಯಾಂಕ್ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಒಟ್ಟು 50 ಸಾವಿರ ರೂ ದಂಡ ವಿಧಿಸಿದೆ.
ಶಿರಸಿಯ ಹೊಸಪೇಟೆ ರಸ್ತೆಯಲ್ಲಿರುವ HDFC ಬ್ಯಾಂಕ್ ಶಾಖೆಯಲ್ಲಿ ವಕೀಲ ಶ್ರೀನಿವಾಸ ಕೃಷ್ಣ ನಾಯ್ಕ ಖಾತೆ ಹೊಂದಿದ್ದರು. ಪ್ರತಿ ತಿಂಗಳು 2 ಸಾವಿರ ರೂ SIP ಮಾಡುವಂತೆ ಅವರು ಬ್ಯಾಂಕ್ಗೆ ಸೂಚಿಸಿದ್ದರು. ಆದರೆ SIP ಕಡಿತದ ಸಂದರ್ಭದಲ್ಲಿ ಖಾತೆಯಲ್ಲಿ ಅಗತ್ಯವಿರುವಷ್ಟು ಹಣವಿಲ್ಲ ಎಂಬ ಕಾರಣ ನೀಡಿ ಬ್ಯಾಂಕ್ ದಂಡ ವಿಧಿಸಿತ್ತು.
2023ರಲ್ಲಿ ಶ್ರೀನಿವಾಸ ಕೃಷ್ಣ ನಾಯ್ಕ ಅವರ ಖಾತೆಯಿಂದ ಒಟ್ಟು ಒಂಬತ್ತು ಬಾರಿ ದಂಡದ ರೂಪದಲ್ಲಿ ಹಣ ಕಡಿತ ಮಾಡಲಾಗಿತ್ತು. ಈ ಕುರಿತು ಅವರು ಬ್ಯಾಂಕಿಗೆ ಪತ್ರ ಬರೆದು, ಬಳಿಕ ನೋಟಿಸ್ ನೀಡಿದ್ದರು. ಹೆಚ್ಚುವರಿಯಾಗಿ ಕಡಿತ ಮಾಡಿರುವ ಹಣವನ್ನು ಮರಳಿಸುವುದಾಗಿ ಬ್ಯಾಂಕ್ ಭರವಸೆ ನೀಡಿದ್ದರೂ, ಹಣವನ್ನು ವಾಪಸ್ ನೀಡಿರಲಿಲ್ಲ.
ಬ್ಯಾಂಕ್ ತನ್ನ ಕ್ರಮವನ್ನು RBI ನಿಯಮಗಳ ಪ್ರಕಾರ ಮಾಡಲಾಗಿದೆ ಎಂದು ವಾದಿಸಿತ್ತು. ಆದರೆ ಪ್ರಕರಣವನ್ನು ಪರಿಶೀಲಿಸಿದ ಗ್ರಾಹಕ ಆಯೋಗ, ಬ್ಯಾಂಕ್ ವಿಧಿಸಿರುವ ದಂಡದಲ್ಲಿ ನಿಯಮಾವಳಿಗೆ ವಿರುದ್ಧವಾದ ಅಂಶಗಳು ಹಾಗೂ ವ್ಯತ್ಯಾಸಗಳಿರುವುದನ್ನು ಗಮನಿಸಿದೆ. ಗ್ರಾಹಕರ ಖಾತೆಯಿಂದ 4,071 ರೂ ಹೆಚ್ಚುವರಿಯಾಗಿ ಕಡಿತ ಮಾಡಿರುವುದು ಸರಿಯಲ್ಲ ಎಂದು ಆಯೋಗ ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಕೃಷ್ಣ ನಾಯ್ಕ ಅವರಿಗೆ 15 ಸಾವಿರ ರೂ ಪರಿಹಾರ ಹಾಗೂ ಪ್ರಕರಣದ ಖರ್ಚಿಗಾಗಿ 5 ಸಾವಿರ ರೂ ಪಾವತಿಸುವಂತೆ ಬ್ಯಾಂಕ್ಗೆ ಸೂಚಿಸಲಾಗಿದೆ. ಅಲ್ಲದೆ, ಗ್ರಾಹಕರಿಗೆ ತೊಂದರೆ ಉಂಟುಮಾಡಿದ ತಪ್ಪಿಗೆ ರೂ. 30 ಸಾವಿರವನ್ನು ಗ್ರಾಹಕ ಕಲ್ಯಾಣ ನಿಧಿಗೆ ಜಮಾ ಮಾಡುವಂತೆ ಆಯೋಗ ಆದೇಶಿಸಿದೆ.
ಒಟ್ಟಾರೆ ರೂ. 50 ಸಾವಿರದ ಹೊಣೆ HDFC ಬ್ಯಾಂಕ್ನ ಮೇಲಿದೆ. ಗ್ರಾಹಕರ ಖಾತೆಯಿಂದ ವಿಧಿಸುವ ಶುಲ್ಕ ಮತ್ತು ದಂಡಗಳು ನಿಯಮಾನುಸಾರ ಇವೆಯೇ ಎಂಬುದನ್ನು ಬ್ಯಾಂಕ್ಗಳು ಸ್ಪಷ್ಟವಾಗಿ ಪರಿಶೀಲಿಸಬೇಕು ಎಂಬ ಸಂದೇಶವನ್ನೂ ಈ ತೀರ್ಪು ನೀಡಿದಂತಾಗಿದೆ.