ಯಲ್ಲಾಪುರ: ಕಳಚೆಯಂತಹ ಗ್ರಾಮೀಣ ಪ್ರದೇಶದಲ್ಲಿ ಪ್ರಧಾನ ಶಾಖೆ ಹೊಂದಿರುವ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಹೆಬ್ಬಾರಕುಂಬ್ರಿ, ಯಲ್ಲಾಪುರ, ಎಪಿಎಂಸಿ ಶಾಖೆ ಸೇರಿದಂತೆ ಜೋಯಿಡಾದಲ್ಲಿ ವ್ಯಾಪಾರ ಕೇಂದ್ರವನ್ನೂ ವಿಸ್ತರಿಸಿ ಸರ್ವ ಸದಸ್ಯರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಮುಂದುವರೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಉಮಾಮಹೇಶ್ವರ ಭಾಗ್ವತ ತಿಳಿಸಿದರು.
ಈ ಕುರಿತು ಯಲ್ಲಾಪುರದ ಎಪಿಎಂಸಿ ಶಾಖೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘವು ಪ್ರಸ್ತುತ 2024-25ರ ಸಾಲಿನಲ್ಲಿ 60.48 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಜೋಯಿಡಾದಲ್ಲಿ ಅಡಕೆ ಬೆಳೆಯುವ ಪ್ರದೇಶಗಳ ವಿಸ್ತರಣೆ ಹೆಚ್ಚುತ್ತಿದೆ. ಆದರೆ ಅಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಸ್ಥಳೀಯರ ಬದಲಾಗಿ ಹೊರಗಿನ ವ್ಯಾಪಾರಸ್ಥರು ಬರುತ್ತಿದ್ದಾರೆ. ಅಲ್ಲಿನ ರೈತರಿಗೆ ನ್ಯಾಯಯುತ ಬೆಲೆ ಒದಗಿಸುವ ಉದ್ದೇಶದಿಂದ ಜೋಯಿಡಾದಲ್ಲಿ ವ್ಯಾಪಾರ ಕೇಂದ್ರವನ್ನು ಆರಂಭಿಸಲಾಗಿದೆ. ಇದೊಂದು ಪ್ರಯೋಗವಾಗಿದ್ದು, ಗ್ರಾಹಕರ ಪ್ರತಿಕ್ರಿಯೆ ಉತ್ತಮವಾಗಿದೆ, ಸವಾಲುಗಳೂ ಅಷ್ಟೇ ಇವೆ ಎಂದು ಹೇಳಿದರು.
ಮುಂಡಗೋಡದಲ್ಲಿಯೂ ಸಹ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಮುಂಬರುವ ದಿನಗಳಲ್ಲಿ ಇನ್ನಷ್ಟು ರೈತಪರ ಯೋಜನೆಗಳನ್ನು ಹಾಕಿಕೊಳ್ಳಲು ಉದ್ದೇಶಿಸಿದ್ದೇವೆ. ಸಂಘದ ಈ ಎಲ್ಲ ಅಭಿವೃದ್ಧಿಗೆ ಶಾಸಕರಾದ ಶಿವರಾಮ ಹೆಬ್ಬಾರ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತಮ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಘವೇಂದ್ರ ಭಟ್ಟ, ಮುಖ್ಯ ಕಾರ್ಯನಿರ್ವಾಹಕ ದತ್ತಾತ್ರಯ ಹೆಗಡೆ, ನಿರ್ದೇಶಕರಾದ ಶ್ರೀಕಾಂತ ಹೆಬ್ಬಾರ, ರಾಮಕೃಷ್ಣ ಹೆಗಡೆ, ಶ್ರೀಪಾದ ಗಾಂವ್ಕರ, ಶ್ರೀನಾಥ ಹೆಗಡೆ, ವಿನುತಾ ಗದ್ದೆ, ಪ್ರೇಮಾ ಭಾಸ್ಕರ ಹೆಗಡೆ, ಯಲ್ಲಾಪುರ ಶಾಖೆಯ ವ್ಯವಸ್ಥಾಪಕ ಪರಶುರಾಮ ಎಸ್.ಮರಾಠಿ, ಎ.ಪಿ.ಎಮ್.ಸಿ.ಶಾಖೆಯ ವ್ಯವಸ್ಥಾಪಕ ಅನಂತ ಆರ್. ಹೆಗಡೆ, ಜೋಯಿಡಾ ಶಾಖೆಯ ವ್ಯವಸ್ಥಾಪಕ ಉದಯ ಭಾಗ್ವತ್ ಉಪಸ್ಥಿತರಿದ್ದರು.