Monday, September 7, 2026
Join WhatsApp Group
HomeLocal Newsಮಳೆ ಮಾಪನ ಕೇಂದ್ರದ ಅವ್ಯವಸ್ಥೆ: ಮಳೆ ವಿವರ ನೀಡಲು ಮನವಿ

ಮಳೆ ಮಾಪನ ಕೇಂದ್ರದ ಅವ್ಯವಸ್ಥೆ: ಮಳೆ ವಿವರ ನೀಡಲು ಮನವಿ

ಯಲ್ಲಾಪುರ: ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳೆ ಮಾಪನ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಫಸಲ್‌ ಭೀಮಾ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ವಿಮೆ ಮಾಡಿಸಿರುವ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕಳಚೆಯ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಆರೋಪಿಸಿದೆ.

ಈ ಕುರಿತು ಸಂಘದ ಅಧ್ಯಕ್ಷ ಉಮಾಮಹೇಶ್ವರ ಭಾಶ್ವತ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಮಳೆ ಮಾಪನ ಕೇಂದ್ರದ ಅವ್ಯವಸ್ಥೆ ಸರಿಪಡಿಸಿ, ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿದ್ದಾರೆ.

ಕಳೆದ ಏಳು ವರ್ಷಗಳಿಂದ ಸಂಘದ ಸದಸ್ಯರು ಫಸಲ್‌ ಭೀಮಾ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ವಿಮಾ ಕಂತು ಪಾವತಿಸುತ್ತಿದ್ದು, ವಿಮಾ ಮೊತ್ತವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಾಖಲಾಗುವ ಮಳೆಯ ಪ್ರಮಾಣವನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಆದರೆ ಕಳೆದ ಎರಡು-ಮೂರು ವರ್ಷಗಳಿಂದ ವಜ್ರಳ್ಳಿ ಪಂಚಾಯಿತಿ ವ್ಯಾಪ್ತಿಯ ಮಳೆ ಮಾಪನ ಕೇಂದ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಮಳೆ ಮಾಪನ ಕೇಂದ್ರದ ಸಮಸ್ಯೆಯಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಹೋರಾಟ ನಡೆಸಿದ ಬಳಿಕ ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳಲ್ಲಿ ದಾಖಲಾಗಿದ್ದ ಮಳೆಯ ಪ್ರಮಾಣವನ್ನು ಆಧರಿಸಿ ವಿಮಾ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಲಾಗಿತ್ತು. ಆದರೆ ಈ ಪದ್ಧತಿಯಿಂದ ವಜ್ರಳ್ಳಿ ವ್ಯಾಪ್ತಿಯ ರೈತರಿಗೆ ನಷ್ಟವಾಗುತ್ತಿದೆ.ವಜ್ರಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಸುರಿಯುವ ಮಳೆಯ ಪ್ರಮಾಣಕ್ಕೆ ಸಮೀಪದ ಮಾವಿನಮನೆ ಪಂಚಾಯಿತಿ ವ್ಯಾಪ್ತಿಯಲ್ಲೂ ಮಳೆಯಾಗುತ್ತದೆ.

ಆದರೆ ಮಾವಿನಮನೆಯಲ್ಲಿ ಮಳೆ ಮಾಪನ ಕೇಂದ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಲ್ಲಿನ ರೈತರಿಗೆ ಅರ್ಹ ಪ್ರಮಾಣದ ವಿಮಾ ಪರಿಹಾರ ದೊರೆಯುತ್ತಿದೆ. ವಜ್ರಳ್ಳಿಯ ಮಳೆ ಮಾಪನ ಕೇಂದ್ರ ಸರಿಯಾಗಿಲ್ಲದ ಕಾರಣ ಇಲ್ಲಿನ ರೈತರಿಗೆ ಹೋಲಿಕೆಯಲ್ಲಿ ಕಡಿಮೆ ವಿಮಾ ಮೊತ್ತ ದೊರೆಯುತ್ತಿದೆ ಎಂದು ಸಂಘ ತಿಳಿಸಿದೆ.

ಕಳೆದ ಎರಡು ದಿನಗಳ ಹಿಂದೆ ಮಳೆ ಮಾಪನ ಕೇಂದ್ರವನ್ನು ದುರಸ್ತಿ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದ್ದರೂ, ಜುಲೈ ಆರಂಭದಿಂದ ಈವರೆಗೆ ಸುರಿದ ಮಳೆಯ ನಿಖರ ದಾಖಲೆ ಲಭ್ಯವಾಗದಿದ್ದರೆ ಮುಂಬರುವ ವಿಮಾ ಪರಿಹಾರ ಪಡೆಯುವ ಸಂದರ್ಭದಲ್ಲಿ ರೈತರಿಗೆ ಮತ್ತೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜುಲೈ ತಿಂಗಳ ಆರಂಭದಿಂದ ಈವರೆಗೆ ಪ್ರತಿದಿನ ದಾಖಲಾಗಿರುವ ಮಳೆಯ ಪ್ರಮಾಣದ ವಿವರಗಳನ್ನು ಒದಗಿಸುವಂತೆ ಸಂಘ ಮನವಿ ಮಾಡಿದ್ದು, ಮಳೆ ಮಾಪನ ಕೇಂದ್ರದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share