ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದಿಂದ ಅರಶೀಣಗೇರಿ ಗ್ರಾಮಕ್ಕೆ ತೆರಳುವ ಡಾಂಬರು ರಸ್ತೆಯ ಪಕ್ಕದ ಕಣಿವೆಯಲ್ಲಿ ಇಸ್ಪೀಟ್ ಜುಗಾರಾಟ ಆಡುತ್ತಿದ್ದ ಐವರನ್ನು ಪೊಲೀಸರು ಪತ್ತೆಹಚ್ಚಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆ.13ರಂದು ರಾತ್ರಿ 10.45ರ ಸುಮಾರಿಗೆ ಐವರು ತಮ್ಮ ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಕೊಂಡು ಅಂದರ್–ಬಾಹರ್ ಜುಗಾರಾಟ ಆಡುತ್ತಿದ್ದ ವೇಳೆ ಪೊಲೀಸರ ಕಾರ್ಯಾಚರಣೆಗೆ ಸಿಕ್ಕಿಬಿದ್ದಿದ್ದಾರೆ.
ಪ್ರಕರಣದಲ್ಲಿ ಇಂದೂರ ಗ್ರಾಮದವರಾದ ರಾಜೇಸಾಬ ಹೈದರಸಾಬ ನೀರಲಗಿ (41), ಅರ್ಜುನ ಕಲ್ಲಪ್ಪ ಕುರತಕೊಟಿ (26), ಜಾಫರಸಾಬ ಫಿರಸಾಬ ತಡಸ (42), ಜೈಲಾನಿ ಹಸನಸಾಬ ಕೂಳಿ (32) ಹಾಗೂ ಮುಂಡಗೋಡದ ಕಂಬಾರಘಟ್ಟಿ ಪ್ಲಾಟ್ನ ಹನುಮಂತ ಬಸಪ್ಪ ತಳವಾರ (38) ಎಂಬುವವರು ಆರೋಪಿತರಾಗಿದ್ದಾರೆ.
ದಾಳಿ ವೇಳೆ ಆರೋಪಿತರಿಂದ 3,200 ರೂ ನಗದು, ಆಟಕ್ಕೆ ಬಳಸುತ್ತಿದ್ದ ಇಸ್ಪೀಟ್ ಎಲೆಗಳು ಹಾಗೂ ಎರಡು ಮೇಣದಬತ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಡಗೋಡ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ಗೌಡರ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.