Monday, September 7, 2026
Join WhatsApp Group
HomeInformationSpecialನಮ್ಮ ಮಕ್ಕಳಿಗೆ ನಾವು ಯಾವ ಭಾರತವನ್ನು ಕೊಟ್ಟು ಹೋಗುತ್ತೇವೆ?

ನಮ್ಮ ಮಕ್ಕಳಿಗೆ ನಾವು ಯಾವ ಭಾರತವನ್ನು ಕೊಟ್ಟು ಹೋಗುತ್ತೇವೆ?

ಭಾರತದ ತ್ರಿವರ್ಣ ಧ್ವಜವನ್ನು ನೋಡಿದಾಗ ನಮ್ಮ ಮನಸ್ಸಿನಲ್ಲಿ ಹೆಮ್ಮೆ ಮೂಡುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ನೆನಪಾಗುತ್ತದೆ. ಭಾರತ ಇಂದು ಸಾಧಿಸಿರುವ ಪ್ರಗತಿಯೂ ಕಣ್ಣ ಮುಂದೆ ಬರುತ್ತದೆ.

ಆದರೆ ಈ ಹೆಮ್ಮೆಯ ಜೊತೆಗೆ ಮತ್ತೊಂದು ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಿದೆ. ನಮ್ಮ ನಂತರದ ಪೀಳಿಗೆಗೆ ನಾವು ಯಾವ ಭಾರತವನ್ನು ಬಿಟ್ಟು ಹೋಗುತ್ತೇವೆ?

ನಾವು ಇಂದು ಬಳಸುತ್ತಿರುವ ಗಾಳಿ, ನೀರು, ಕಾಡು, ನದಿಗಳು ಮತ್ತು ಭೂಮಿ ನಮ್ಮ ಆಸ್ತಿ ಮಾತ್ರವಲ್ಲ. ಅವು ನಮ್ಮ ಮಕ್ಕಳಿಗೂ ಸೇರಿವೆ. ಇಂದು ಪ್ರಕೃತಿಗೆ ನಾವು ಮಾಡುವ ಹಾನಿಯ ಪರಿಣಾಮವನ್ನು ಮುಂದಿನ ಪೀಳಿಗೆ ಅನುಭವಿಸಬೇಕಾಗಬಹುದು. ದೇಶದ ಅಭಿವೃದ್ಧಿಯೂ ಬೇಕು, ಆದರೆ ಪ್ರಕೃತಿಯನ್ನು ನಾಶಮಾಡಿ ಮಾಡುವ ಅಭಿವೃದ್ಧಿ ಬೇಡ. ರಸ್ತೆ ಬೇಕು, ಕೈಗಾರಿಕೆ ಬೇಕು, ನಗರಗಳು ಬೆಳೆಯಬೇಕು. ಆದರೆ ಅದೇ ಸಮಯದಲ್ಲಿ ಕಾಡು, ನದಿ, ಕೃಷಿ ಭೂಮಿ ಮತ್ತು ಜೀವವೈವಿಧ್ಯವನ್ನೂ ಉಳಿಸಬೇಕು.

ನಾವು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಎನ್ನುತ್ತೇವೆ. ಆದರೆ ಶಿಕ್ಷಣ ಎಂದರೆ ಕೇವಲ ಹೆಚ್ಚು ಅಂಕಗಳನ್ನು ಪಡೆಯುವುದಷ್ಟೇ ಅಲ್ಲ. ಸತ್ಯದ ಪರವಾಗಿರುವುದು, ಮತ್ತೊಬ್ಬರನ್ನು ಗೌರವಿಸುವುದು, ತಪ್ಪುಗಳನ್ನು ಕಂಡಾಗ ಪ್ರಶ್ನಿಸುವ ಧೈರ್ಯ ಹೊಂದುವುದು, ಅನ್ಯಾಯ-ಅಕ್ರಮಗಳನ್ನು ವಿರೋಧಿಸುವುದು, ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸುವುದು, ಪ್ರಕೃತಿಯ ಬಗ್ಗೆ ಕಾಳಜಿ ವಹಿಸುವುದು—ಇವೆಲ್ಲವೂ ಶಿಕ್ಷಣದ ಭಾಗವಾಗಬೇಕಲ್ಲವೇ?!

ಇಂದು ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಭಾಗವಾಗಿವೆ. ಒಂದು ಸುದ್ದಿಯನ್ನು ಪರಿಶೀಲಿಸದೆ ಹಂಚುವುದು ಎಷ್ಟು ಸುಲಭವೋ, ಅದರಿಂದ ತಪ್ಪು ಕಲ್ಪನೆ ಹರಡುವುದೂ ಅಷ್ಟೇ ಸುಲಭ. ಆದ್ದರಿಂದ ಮುಂದಿನ ಪೀಳಿಗೆಗೆ ತಂತ್ರಜ್ಞಾನವನ್ನು ಕೊಡುವುದರ ಜೊತೆಗೆ ಅದನ್ನು ಜವಾಬ್ದಾರಿಯಿಂದ ಬಳಸುವ ಅರಿವನ್ನೂ ನೀಡಬೇಕಾಗಿದೆ.

ನಾವು ಅನುಭವಿಸಿದ ಕಷ್ಟ-ಕೋಟಲೆಗಳು ನಮ್ಮ ಮಕ್ಕಳನ್ನು ತಾಕದಿರಲಿ ಎಂದು ಅವರಿಗಾಗಿ ಹಣ, ದೊಡ್ಡ ಮನೆ, ಉತ್ತಮ ಮೊಬೈಲ್, ಒಳ್ಳೆಯ ಉದ್ಯೋಗ, ಐಷಾರಾಮಿ ಬದುಕು ಇರಲಿ ಎಂದು ಬಯಸುತ್ತೇವೆ. ಇವೆಲ್ಲವೂ ಬೇಕೇ ಬೇಕು. ಆದರೆ ಅದಕ್ಕಿಂತ ಮುಖ್ಯವಾಗಿ ಅವರಿಗೆ ಒಳ್ಳೆಯ ಸಂಸ್ಕಾರ ಸಿಗಬೇಕು.

ಭಯವಿಲ್ಲದೆ ಬದುಕುವ, ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳುವ, ತಮ್ಮ ಅಭಿಪ್ರಾಯವನ್ನು ಅಂಜದೆ ಹೇಳುವ ಮತ್ತು ಇತರರ ಹಕ್ಕುಗಳನ್ನು ಗೌರವಿಸುವ, ಸೋತಾಗ ಕಂಗೆಡದೆ ದಿಟ್ಟ ಹೆಜ್ಜೆಯನ್ನಿಟ್ಟು ಮುಂದೆ ಸಾಗುವಂತಹ ವ್ಯಕ್ತಿತ್ವ ನಮ್ಮ ಯುವಜನತೆಯದ್ದಾಗಬೇಕು.

ಮುಂದಿನ ಪೀಳಿಗೆಗೆ ನಾವು ಕೇವಲ ಆಸ್ತಿ-ಪಾಸ್ತಿ ಬಿಟ್ಟು ಹೋಗುವುದಿಲ್ಲ. ನಾವು ಕಟ್ಟಿದ ಸಮಾಜವನ್ನೂ ಬಿಟ್ಟು ಹೋಗುತ್ತೇವೆ. ನಾವು ಇಂದು ಹೇಗೆ ಬದುಕುತ್ತೇವೆ, ಹೇಗೆ ಮಾತನಾಡುತ್ತೇವೆ, ಪ್ರಕೃತಿಯನ್ನು ಹೇಗೆ ನೋಡಿಕೊಳ್ಳುತ್ತೇವೆ, ಕಾನೂನುಗಳನ್ನು ಹೇಗೆ ಗೌರವಿಸುತ್ತೇವೆ, ಪರಸ್ಪರ ಹೇಗೆ ವರ್ತಿಸುತ್ತೇವೆ…ಇವೆಲ್ಲವೂ ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತವೆ.

ಹೀಗಾಗಿ ದೇಶ ಕಟ್ಟುವುದು ಎಂದರೆ ಕೇವಲ ಸರ್ಕಾರ ಮಾಡುವ ಕೆಲಸವಲ್ಲ. ಪ್ರತಿಯೊಬ್ಬರ ಸಣ್ಣ ಸಣ್ಣ ನಡೆಗಳೂ ದೇಶದ ಭವಿಷ್ಯವನ್ನು ರೂಪಿಸುತ್ತವೆ. ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಹೇಳೋಣ. ಆದರೆ ಅದಕ್ಕಿಂತ ಮುಂದೆ ಹೋಗಿ, ಸ್ವಾತಂತ್ರ್ಯದ ಅರ್ಥವನ್ನೂ ಕಲಿಸೋಣ. ಧ್ವಜಕ್ಕೆ ಗೌರವ ಕೊಡುವುದನ್ನು ಕಲಿಸೋಣ. ಆದರೆ ಧ್ವಜ ಪ್ರತಿನಿಧಿಸುವ ಮೌಲ್ಯಗಳಿಗೂ ಗೌರವ ಕೊಡುವುದನ್ನು ಕಲಿಸೋಣ.

ನಾವು ನಮ್ಮ ಮಕ್ಕಳಿಗೆ ಯಾವ ಭಾರತವನ್ನು ಬಿಟ್ಟು ಹೋಗುತ್ತೇವೆ ಎಂಬುದೇ ನಮ್ಮ ಪೀಳಿಗೆಯ ನಿಜವಾದ ಸಾಧನೆಯ ಅಳತೆ. ಆದ್ದರಿಂದ ಈ ಸ್ವಾತಂತ್ರ್ಯ ದಿನದಂದು ಒಂದು ಸಂಕಲ್ಪ ಮಾಡೋಣ. ನಾವು ಪಡೆದ ಭಾರತವನ್ನು ಕೇವಲ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದಲ್ಲ, ನಾವು ಪಡೆದದ್ದಕ್ಕಿಂತ ಸ್ವಲ್ಪ ಉತ್ತಮವಾದ ಭಾರತವನ್ನು ಅವರಿಗೆ ಕೊಟ್ಟು ಹೋಗೋಣ.

ಅದೇ ಸ್ವಾತಂತ್ರ್ಯಕ್ಕೆ ನಾವು ಸಲ್ಲಿಸಬಹುದಾದ ಅತ್ಯಂತ ದೊಡ್ಡ ಗೌರವ.

– ಸೌಪರ್ಣಿಕಾ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share