ರಾಷ್ಟ್ರೀಯ ಮೌಲ್ಯಮಾಪನ ತಂಡದಿಂದ ಪರಿಶೀಲನೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 2014ರಿಂದ ಯಾವುದೇ ಸ್ಥಳೀಯ ಮಲೇರಿಯಾ ಪ್ರಕರಣಗಳು ವರದಿಯಾಗದ ಹಿನ್ನೆಲೆಯಲ್ಲಿ, ಮಲೇರಿಯಾ ನಿರ್ಮೂಲನಾ ಪ್ರಮಾಣೀಕರಣಕ್ಕೆ ಜಿಲ್ಲೆ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಮೌಲ್ಯಮಾಪನ ತಂಡವು ಇತ್ತೀಚೆಗೆ ಮೂರು ದಿನಗಳ ಕಾಲ ಜಿಲ್ಲೆಗೆ ಭೇಟಿ ನೀಡಿ ವಿವಿಧ ಆರೋಗ್ಯ ಕೇಂದ್ರಗಳು ಹಾಗೂ ಮಲೇರಿಯಾ ನಿಯಂತ್ರಣ ಚಟುವಟಿಕೆಗಳನ್ನು ಪರಿಶೀಲಿಸಿತು.
ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ. ತಾರಕ ಸೌರಭ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ರಾಜ್ಯ ಕಾರ್ಯಕ್ರಮ ಅಧಿಕಾರಿ ಡಾ. ಗಣೇಶ ಕಮಲಾಕರ ವೆರ್ಣೇಕರ, ಆಂಧ್ರಪ್ರದೇಶದ ಜಿಲ್ಲಾ ವೈದ್ಯಾಧಿಕಾರಿ ಡಾ. ಕ್ರಾಂತಿಕುಮಾರ ಹಾಗೂ ಪುದುಚೇರಿಯ ವೈದ್ಯಾಧಿಕಾರಿ ಡಾ. ಐಶ್ವರ್ಯ ಪೆರುಮಾಳ್ ತಂಡದಲ್ಲಿದ್ದರು.
ಮೌಲ್ಯಮಾಪನದ ಭಾಗವಾಗಿ ತಂಡವು ಕಾರವಾರ ವೈದ್ಯಕೀಯ ಕಾಲೇಜು, ಭಾರತೀಯ ನೌಕಾ ಸೇವೆಯ ಪತಂಜಲಿ, ಬಂದರು ಪ್ರದೇಶ, ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ಪ್ರಯೋಗಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇದರೊಂದಿಗೆ ಕಾರವಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ದಿವಗಿ ಆರೋಗ್ಯ ಉಪಕೇಂದ್ರ, ಅಂಕೋಲಾ ತಾಲೂಕು ಆಸ್ಪತ್ರೆ, ಶಿರಾಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕಾರವಾರ ಆರೋಗ್ಯ ಉಪಕೇಂದ್ರಗಳಿಗೂ ಭೇಟಿ ನೀಡಲಾಯಿತು.
ವಿಶೇಷವಾಗಿ ದಿವಗಿ ಗ್ರಾಮದ ಕೊನೆಯ ಸ್ಥಳೀಯ ಮಲೇರಿಯಾ ಪ್ರಕರಣ ನಡೆದ ಸ್ಥಳಕ್ಕೂ ತಂಡ ಭೇಟಿ ನೀಡಿತು. ಗ್ರಾಮದಲ್ಲಿ ಕೈಗೊಳ್ಳಲಾಗುತ್ತಿರುವ ವೆಕ್ಟರ್ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿದ ತಂಡ, ಆಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಮಲೇರಿಯಾ ನಿಯಂತ್ರಣದ ಕುರಿತಾದ ಸ್ಥಳೀಯ ಪರಿಸ್ಥಿತಿಯ ಮಾಹಿತಿಯನ್ನು ಪಡೆದುಕೊಂಡಿತು.
ಜಿಲ್ಲೆಯಲ್ಲಿ ಮಲೇರಿಯಾ ನಿರ್ಮೂಲನೆಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಕೈಗೊಂಡಿರುವ ವಿವಿಧ ಚಟುವಟಿಕೆಗಳನ್ನೂ ತಂಡ ಪರಿಶೀಲಿಸಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಜಯ್ ದೊಡ್ಡಮನಿ ಹಾಗೂ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ರಮೇಶ ರಾವ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಗಳ ಜೊತೆಗೆ, ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ರಕ್ಷಣಾ ಅಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ವೈದ್ಯಕೀಯ ಅಧಿಕಾರಿಗಳು ಸೇರಿದಂತೆ ತಳಮಟ್ಟದ ಆರೋಗ್ಯ ಕಾರ್ಯಕರ್ತರ ಸೇವೆಯನ್ನು ತಂಡ ಶ್ಲಾಘಿಸಿತು.
2014ರಿಂದ ಸ್ಥಳೀಯ ಮಲೇರಿಯಾ ಪ್ರಕರಣಗಳಿಲ್ಲದಿರುವುದು ಜಿಲ್ಲೆಗೆ ಮಹತ್ವದ ಸಾಧನೆಯಾಗಿದ್ದು, ರಾಷ್ಟ್ರೀಯ ತಂಡದ ಈ ಮೌಲ್ಯಮಾಪನವು ಮಲೇರಿಯಾ ನಿರ್ಮೂಲನಾ ಪ್ರಮಾಣೀಕರಣದತ್ತ ಉತ್ತರ ಕನ್ನಡದ ಪ್ರಯತ್ನಕ್ಕೆ ಮತ್ತೊಂದು ಪ್ರಮುಖ ಹಂತವಾಗಿದೆ.