ಮುರುಡೇಶ್ವರ: ಸ್ವಾತಂತ್ರ್ಯೋತ್ಸವದಂದು ಮುರುಡೇಶ್ವರ ಬೀಚ್ ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಪ್ರದೇಶಗಳಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಒಟ್ಟು ಆರು ಮಂದಿಯ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಆರೋಪಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಮೊದಲ ಪ್ರಕರಣದಲ್ಲಿ ಹುಬ್ಬಳ್ಳಿಯ ಕೆ.ಎಚ್.ಬಿ ಜಡ್ಜ್ ಕಾಲೋನಿ 4ನೇ ಕ್ರಾಸ್ ನಿವಾಸಿ, ಖಾಸಗಿ ಉದ್ಯೋಗಿ ಮಹಾಂತೇಶ ಯಮನಪ್ಪ ಜಿನಗಿ ಹಾಗೂ ಹುಬ್ಬಳ್ಳಿಯ ಗೊಪನಕೊಪ್ಪ ನಿವಾಸಿ, ಖಾಸಗಿ ಉದ್ಯೋಗಿ ಕಾರ್ತಿಕ ಶಂಕರ ಜಗದಾಳೆ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಿಬ್ಬರನ್ನು ಆ.15ರಂದು ರಾತ್ರಿ ಸುಮಾರು 9.50ರ ವೇಳೆಗೆ ಮುರುಡೇಶ್ವರದ ಮಹತೋಬಾರ ದೇವಸ್ಥಾನದ ಸಮೀಪದ ಬಲಬದಿಯ ಬೀಚ್‌ನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಅನುಮಾನದ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದರು.
ಎರಡನೇ ಪ್ರಕರಣದಲ್ಲಿ ಹುಬ್ಬಳ್ಳಿಯ ಉಣಕಲ್ ಸಾಯಿನಗರ ನಿವಾಸಿ, ಟೆಕ್ನಿಷಿಯನ್ ಸುನೀಲ್ ರಮೇಶ ಕೋಟಿ ಹಾಗೂ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ನಿವಾಸಿ ಚೈತನ್ಯ ಸುಧೀರ ಬೆಟಗೇರಿ ವಿರುದ್ಧ ಪ್ರಕರಣ ದಾಖಲಾಗಿದೆ. ಆ.15ರಂದು ರಾತ್ರಿ ಸುಮಾರು 10 ಗಂಟೆಗೆ ಮುರುಡೇಶ್ವರ ಬೀಚ್‌ನ ಎಡಭಾಗದ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಅನುಮಾನದ ಮೇಲೆ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇನ್ನು ಮೂರನೇ ಪ್ರಕರಣದಲ್ಲಿ ಹುಬ್ಬಳ್ಳಿ ತಾಲೂಕಿನ ಅಮರಗೋಳ ನಿವಾಸಿ ಸುನೀಲ್ ಕುಮಾರ್ ಯಮನಪ್ಪ ಜಿನಗಿ ಹಾಗೂ ಗದಗ ಜಿಲ್ಲೆಯ ಕಲ್ಲೂರು ನಿವಾಸಿ ವಿನಾಯಕ ವೆಂಕಪ್ಪ ಮುಶಣ್ಣವರ ವಿರುದ್ಧ ಪ್ರಕರಣ ದಾಖಲಾಗಿದೆ. ಆ.15ರಂದು ರಾತ್ರಿ ಸುಮಾರು 10.25ರ ವೇಳೆಗೆ ಮುರುಡೇಶ್ವರದ ಮಹತೋಬಾರ ದೇವಸ್ಥಾನದ ಮುಂದಿನ ತೂದಳ್ಳಿ ರಸ್ತೆಯ ಮೀನು ಮಾರುಕಟ್ಟೆ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಅನುಮಾನದ ಮೇಲೆ ಇವರನ್ನು ವಶಕ್ಕೆ ಪಡೆಯಲಾಗಿತ್ತು.
ಮೂರು ಪ್ರಕರಣಗಳಲ್ಲೂ ಆರೋಪಿತರನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಒಂದೇ ರಾತ್ರಿ ಮುರುಡೇಶ್ವರ ಬೀಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಈ ಮೂರು ಪ್ರತ್ಯೇಕ ಪ್ರಕರಣಗಳು ಇದೀಗ ಪೊಲೀಸರ ಗಮನ ಸೆಳೆದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಸೇವನೆ ವಿರುದ್ಧ ಪೊಲೀಸರು ಕ್ರಮ ಮುಂದುವರಿಸಿದ್ದಾರೆ.