ಯಲ್ಲಾಪುರ: ಅರಬೈಲ್ ಘಟ್ಟದ ರಸ್ತೆ ಬದಿಯ ನೀರಿನ ಗಟಾರದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾದ ಪ್ರಕರಣವನ್ನು ಯಲ್ಲಾಪುರ ಪೊಲೀಸರು ಭೇದಿಸಿದ್ದು, ಮೃತನೊಂದಿಗೆ ಕೆಲಸ ಮಾಡುತ್ತಿದ್ದ ವಾಹನದ ಚಾಲಕನನ್ನೇ ಕೊಲೆ ಆರೋಪದಡಿ ಬಂಧಿಸಿದ್ದಾರೆ.
ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಕೆಲ್ವಾಡ ಖುರ್ದ ಗ್ರಾಮದ ಆಕಾಶ ದಶರಥ ರಜಪೂತ (23) ಕೊಲೆಯಾದ ಯುವಕ. ಲಾರಿ ಚಾಲಕ ಹಾಗೂ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಆಕಾಶನ ಮೃತದೇಹ ಆ.13ರಂದು ಯಲ್ಲಾಪುರ ತಾಲೂಕಿನ ಮೂಲೆಪಾಲ ವ್ಯಾಪ್ತಿಯ ಅರಬೈಲ್ ಘಟ್ಟದ ಡಾಂಬರು ರಸ್ತೆಯ ಪಕ್ಕದ ನೀರಿನ ಗಟಾರದಲ್ಲಿ ಪತ್ತೆಯಾಗಿತ್ತು.
ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಅಲ್ಲಿ ತಂದು ಹಾಕಿರುವ ಶಂಕೆ ವ್ಯಕ್ತಪಡಿಸಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಎಂ.ಎಚ್.-17/ಬಿ.ವೈ.-7121 ನೋಂದಣಿಯ ಈಚರ್ ವಾಹನದ ಚಾಲಕ ಹಾಗೂ ಮಾಲೀಕ ಮಹಾರಾಷ್ಟ್ರದ ಪ್ರಕಾಶ ಗಣಪತ ವಿಫೆ ಎಂಬಾತ ಠಾಣೆಗೆ ಬಂದು, ತನ್ನ ವಾಹನದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಆಕಾಶ ತನ್ನ ಕುತ್ತಿಗೆಯಲ್ಲಿದ್ದ ಚೈನ್ ಕಿತ್ತುಕೊಂಡು ಹೋಗಿದ್ದಾನೆ ಎಂದು ದೂರು ನೀಡಲು ಬಂದಿದ್ದ. ಪೊಲೀಸರು ಆತನನ್ನು ಕರೆದುಕೊಂಡು ಅರಬೈಲ್ ಘಟ್ಟದ ಬಳಿ ತೆರಳಿ ಪರಿಶೀಲಿಸಿದಾಗ, ಆತ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದ ಆಕಾಶನೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ.
ಇದರಿಂದ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಚಾಲಕ ಪ್ರಕಾಶನ ಹೇಳಿಕೆಗಳು ಹಾಗೂ ಆತನ ನಡೆ-ನುಡಿಗಳ ಕುರಿತು ಪೊಲೀಸರು ಕೂಲಂಕಷ ವಿಚಾರಣೆ ನಡೆಸಿದ್ದಾರೆ. ಯಲ್ಲಾಪುರ ತಾಲೂಕು ಸೇರಿದಂತೆ ವಿವಿಧ ಪ್ರದೇಶಗಳ ಸಿಸಿಟಿವಿ ದೃಶ್ಯಗಳು ಹಾಗೂ ಇತರೆ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದ ವೇಳೆ ಆಕಾಶನ ಸಾವಿನ ಹಿಂದೆ ಪ್ರಕಾಶನ ಕೈವಾಡವಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆ.16ರಂದು ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೊಲೆ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಆಯುಧಗಳು ಹಾಗೂ ಈಚರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಪ್ರಕಾಶನನ್ನು ಆ.17ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ತನಿಖೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಯಲ್ಲಾಪುರ ಪೊಲೀಸ್ ನಿರೀಕ್ಷಕ ರಮೇಶ ಎಚ್. ಹನಾಪುರ, ಪಿಎಸ್‌ಐಗಳಾದ ರಾಜಶೇಖರ ವಂದಲಿ, ಮಹಾವೀರ ಡಿ. ಕಾಂಬಳೆ, ಸಿದ್ದಪ್ಪ ಗುಡಿ, ಸಿಬ್ಬಂದಿಗಳಾದ ರಾಘವೇಂದ್ರ ಮೂಳೆ, ಸಂತೋಷ ಬಾಳೇರಾ, ಬಸವರಾಜ ಡಿ.ಕೆ., ರಾಚಪ್ಪ ಧನಗರ, ಪ್ರವೀಣ ಪೂಜಾರ, ಕೆ.ಹೆಚ್. ಮಾರುತಿ, ವಿಶ್ವನಾಥ ಜಾಯನಗೌಡರ್, ತಾಂತ್ರಿಕ ವಿಭಾಗದ ಎಆರ್‌ಎಸ್‌ಐ ಬಬನ್, ಉದಯ ಗುನಗಾ ಮುಂತಾದವರು ಭಾಗವಹಿಸಿದ್ದರು.
ಪ್ರಕರಣವನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.