Monday, September 7, 2026
Join WhatsApp Group
HomeLocal Newsನನ್ನ ಸಾಮಾಜಿಕ ಕಾರ್ಯದಲ್ಲೂ ಸ್ವಾರ್ಥವಿದೆ!

ನನ್ನ ಸಾಮಾಜಿಕ ಕಾರ್ಯದಲ್ಲೂ ಸ್ವಾರ್ಥವಿದೆ!

ಸರ್ಕಾರಿ ಶಾಲಾ ಮಕ್ಕಳಿಗೆ 75ಕ್ಕೂ ಹೆಚ್ಚು ಬ್ಯಾಗ್‌ ವಿತರಿಸಿದ ಉದ್ಯಮಿ ಬಾಲಕೃಷ್ಣ ನಾಯಕ್‌ ನುಡಿ

ಯಲ್ಲಾಪುರ: ʻನಾನು ಮಾಡುತ್ತಿರುವ ಈ ಸಾಮಾಜಿಕ ಕಾರ್ಯದಲ್ಲಿಯೂ ಒಂದು ಸ್ವಾರ್ಥವಿದೆ. ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದ ಕಲಿಕೆಯಿಂದ ದೂರ ಉಳಿಯಬಾರದು. ಯಾವುದೇ ಕೀಳರಿಮೆ ಇಲ್ಲದೆ ಆತ್ಮವಿಶ್ವಾಸದಿಂದ ಕಲಿತು ಮುಂದೆ ಬರಬೇಕುʼ ಇದು ಉದ್ಯಮಿ ಹಾಗೂ ಯುವ ಮುಖಂಡ ಬಾಲಕೃಷ್ಣ ನಾಯಕ್‌ ಅವರ ಮಾತು.

ತಾಲೂಕಿನ ಸಹಸ್ರಳ್ಳಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಕೂಲ್‌ ಬ್ಯಾಗ್ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಈ ಕಾರ್ಯವನ್ನು ಮುಂದುವರಿಸುತ್ತಿರುವುದಾಗಿ ಹೇಳಿದರು.

ತಾಲೂಕಿನ ಸಹಸ್ರಳ್ಳಿ ವ್ಯಾಪ್ತಿಯ ಲಿಂಗನಕೊಪ್ಪ, ರಾಮನಕೊಪ್ಪ ಹಾಗೂ ಸಹಸ್ರಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬುಧವಾರ ಉಚಿತ ಶಾಲಾ ಬ್ಯಾಗ್‌ ವಿತರಿಸಲಾಯಿತು. ಲಿಂಗನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಕೃಷ್ಣ ನಾಯಕ್‌ ಅವರು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ಹಸ್ತಾಂತರಿಸಿದರು.

ʻನಮ್ಮ ಮಕ್ಕಳೂ ಎಲ್ಲರಂತೆಯೇ ಕಲಿಕೆಯಲ್ಲಿ ಮುಂದೆ ಬರಬೇಕು. ಹಣಕಾಸಿನ ಸಮಸ್ಯೆ ಅವರ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎಂಬ ಕೀಳರಿಮೆ ಮಕ್ಕಳಲ್ಲಿ ಮೂಡಬಾರದು. ಬದಲಾಗಿ ಆತ್ಮವಿಶ್ವಾಸದಿಂದ ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕುʼ ಎಂದು ಅವರು ಹೇಳಿದರು.

ಗ್ರಾಮೀಣ ಭಾಗದ ಪಾಲಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹದಿಂದ ಹೊರಬಂದು ಸರ್ಕಾರಿ ಶಾಲೆಗಳಲ್ಲಿಯೇ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನಹರಿಸಬೇಕು ಎಂದು ಬಾಲಕೃಷ್ಣ ನಾಯಕ್‌ ಸಲಹೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಕರು, ಉತ್ತಮ ಕಲಿಕಾ ವಾತಾವರಣವಿದೆ. ಮಕ್ಕಳ ಭವಿಷ್ಯಕ್ಕೆ ಬೇಕಾಗಿರುವುದು ಶಾಲೆಯ ಹೆಸರು ಮಾತ್ರವಲ್ಲ, ಅವರಲ್ಲಿರುವ ಕಲಿಕೆಯ ಆಸಕ್ತಿ ಮತ್ತು ಆತ್ಮವಿಶ್ವಾಸ ಎಂದು ಅವರು ಅಭಿಪ್ರಾಯಪಟ್ಟರು.

ಲಿಂಗನಕೊಪ್ಪ ಶಾಲೆಗೆ ಶಾಶ್ವತ ಕುಡಿಯುವ ನೀರಿನ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಸ್ವಂತ ಖರ್ಚಿನಲ್ಲಿ ಬೋರ್‌ವೆಲ್‌ ಕೊರೆಯಿಸಿಕೊಡುವುದಾಗಿ ಬಾಲಕೃಷ್ಣ ನಾಯಕ್‌ ಇದೇ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು. ಕಾರ್ಯಕ್ರಮದಲ್ಲಿ 75ಕ್ಕೂ ಹೆಚ್ಚು ಶಾಲಾ ಬ್ಯಾಗ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಲಿಕಾ ಸಾಮಗ್ರಿಗಳನ್ನು ಪಡೆದ ವಿದ್ಯಾರ್ಥಿಗಳ ಮುಖದಲ್ಲಿ ಸಂತಸದ ಕಳೆ ಮೂಡಿತು.

ಕಾರ್ಯಕ್ರಮದಲ್ಲಿ ಪ್ರವೀಣ ಪಾಟೀಲ್‌, ಕೇಶವ ಮರಾಠಾ, ನಾಗರಾಜ್‌ ಭೋವಿ, ದೀಪಕ್‌ ಮರಾಠಿ, ಶೇಷು ಘಾಡಿ, ಯೋಗೇಶ ಗೌಡ, ನವೀನ್‌ ಅಂಕೋಲೇಕರ, ನಿತ್ಯಾನಂದ ಮರಾಠಿ, ಸತೀಶ್‌ ಭಟ್ಟ ಗುಂಡ್ಯಾನಕೊಪ್ಪ, ಸುಬ್ಬಣ್ಣ ಉದ್ದಾಬೈಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲಿಂಗನಕೊಪ್ಪ ಶಾಲೆಯ ಮುಖ್ಯೋಪಾಧ್ಯಾಯ ವಿನಾಯಕ ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಸೌಮ್ಯಾ ಭಾಗ್ವತ್‌ ವಂದಿಸಿದರು. ಶಿಕ್ಷಕರು, ಪೋಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ವೇದಿಕೆಗೆ ಆಗಮಿಸಿದ ಯುವ ಮುಖಂಡ, ಉದ್ಯಮಿ ಬಾಲಕೃಷ್ಣ ನಾಯಕ್‌ ಅವರನ್ನು ಶಾಲಾ ವಿದ್ಯಾರ್ಥಿಗಳು ಪುಷ್ಪವೃಷ್ಟಿಯ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share