Monday, September 7, 2026
Join WhatsApp Group
HomeLocal Newsಮನೆ ಬಾಗಿಲಿಗೇ ಬರುತ್ತೆ ಜಾತಿ, ಆದಾಯ ಪ್ರಮಾಣಪತ್ರ!

ಮನೆ ಬಾಗಿಲಿಗೇ ಬರುತ್ತೆ ಜಾತಿ, ಆದಾಯ ಪ್ರಮಾಣಪತ್ರ!

ಕಾರವಾರ: ಇದುವರೆಗೆ ಜಾತಿ ಪ್ರಮಾಣಪತ್ರ ಪಡೆಯಬೇಕಾದರೆ ಜನರು ಸ್ವತಃ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ, ಪರಿಶೀಲನೆ ಮುಗಿಯುವವರೆಗೆ ಕಾಯಬೇಕಿತ್ತು. ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಉಚಿತವಾಗಿ ಡಿಜಿಟಲ್ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಜಾರಿಗೊಳಿಸಿದ್ದು, ಈ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 9.60 ಲಕ್ಷ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ವಿತರಿಸುವ ಮೂಲಕ ಶೇ.85.76 ಸಾಧನೆ ಮಾಡಲಾಗಿದೆ.

ಸರ್ಕಾರದ ವಿವಿಧ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿ, ಕಂದಾಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಫಲಾನುಭವಿಗಳಿಗೆ ತಲುಪಿಸುವ ಈ ಪ್ರಕ್ರಿಯೆಯು ಹಲವು ತಿಂಗಳುಗಳ ಸಿದ್ಧತೆಯ ಫಲ ಇದಾಗಿದ್ದು, ಸಾಂಪ್ರದಾಯಿಕವಾಗಿ ಇಂತಹ ಪ್ರಮಾಣಪತ್ರಗಳನ್ನು ವಿತರಿಸಲು ಪ್ರತ್ಯೇಕ ಅರ್ಜಿ, ಪರಿಶೀಲನೆ, ಸಹಿ ಪಡೆಯುವ ಪ್ರಕ್ರಿಯೆ ಬೇಕಿತ್ತು. ಈಗ ಈಗಾಗಲೇ ಸರ್ಕಾರದ ಬಳಿ ಇರುವ ಕಂದಾಯ ದಾಖಲೆ, ಜಾತಿ ಗಣತಿ ಮಾಹಿತಿ ಹಾಗೂ ಆಧಾರ್ ಸಂಪರ್ಕ ಬಳಸಿಕೊಂಡು, ಈಗಾಗಲೇ ಅರ್ಹತೆ ಇರುವ ಫಲಾನುಭವಿಗಳಿಗೆ ನೇರವಾಗಿ ಪ್ರಮಾಣಪತ್ರ ಸಿದ್ಧಪಡಿಸಿ ತಲುಪಿಸುವ ವಿಧಾನವನ್ನು ಸರ್ಕಾರ ಅನುಸರಿಸುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 11,17,946 ಜಾತಿ ಮತ್ತು ಅದಾಯ ಪ್ರಮಾಣಪತ್ರಗಳನ್ನು ಉಚಿತವಾಗಿ ಸಾರ್ವಜನಿಕರ ಮೆನ ಬಾಗಿಲಿಗೆ ತೆರಳಿ ವಿತರಿಸುವ ಗುರಿ ಹೊಂದಲಾಗಿದ್ದು, ಇಂದಿನವರೆಗೆ ಒಟ್ಟು 9,60,218 ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ಹೊನ್ನಾವರ ತಾಲೂಕಿನಲ್ಲಿ 1,09,188, ಸಿದ್ದಾಪುರ 56,659, ಯಲ್ಲಾಪುರ 57,407 ಕಾರವಾರ 1,04,426, ಸೂಪಾ 54,318, ಅಂಕೋಲಾ 1,22,805, ಹಳಿಯಾಳ 56,702, ಶಿರಸಿ 94,509, ಮುಂಡಗೋಡು 75,019, ಭಟ್ಕಳ 43,699, ಕುಮಟಾ 1,65,025 ಮತ್ತು ದಾಂಡೇಲಿಯಲ್ಲಿ 23,461 ಸಂಖ್ಯೆಯ ಪ್ರಮಾಣಪತ್ರಗಳನ್ನು ಈಗಾಗಲೇ ವಿತರಿಸಲಾಗಿದೆ.

ಈ ಮೊದಲು ಸಿಬ್ಬಂದಿ ಕೊರತೆ, ಸರ್ವರ್ ಸಮಸ್ಯೆ ಮುಂತಾದ ಕಾರಣಗಳಿಂದ ವಾರಗಟ್ಟಲೆ, ಕೆಲವೊಮ್ಮೆ ತಿಂಗಳುಗಟ್ಟಲೆ ವಿಳಂಬವಾಗುತ್ತಿತ್ತು. ಗ್ರಾಮೀಣ ಪ್ರದೇಶದ ಜನರಿಗೆ ತಾಲೂಕು ಕೇಂದ್ರಕ್ಕೆ ಹೋಗಿ ಬರುವುದೇ ದೊಡ್ಡ ಸವಾಲಾಗಿತ್ತು. ಒಂದು ಪ್ರಮಾಣಪತ್ರಕ್ಕಾಗಿ ಎರಡು-ಮೂರು ಬಾರಿ ಅಲೆದಾಡಬೇಕಾದ ಪರಿಸ್ಥಿತಿ ಇತ್ತು.

ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಸಮಯದಲ್ಲಿ ಪ್ರಮಾಣಪತ್ರ ಸಿಗದೆ ಸ್ಕಾಲರ್‌ಶಿಪ್ ಅಥವಾ ಸೀಟು ಕಳೆದುಕೊಂಡ ಉದಾಹರಣೆಗಳಿದ್ದು, ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಈಗ ಪ್ರಕ್ರಿಯೆಯನ್ನೇ ತಿರುಗಿಸಿ, ಜನರ ಬಳಿಗೆ ಸೇವೆಯನ್ನು ತರುವ ನಿರ್ಧಾರ ಕೈಗೊಂಡಿದೆ.

 ಜಾತಿ ಮತ್ತು ಅದಾಯ ಪ್ರಮಾಣಪತ್ರಗಳನ್ನು ಉಚಿತವಾಗಿ ಸಾರ್ವಜನಿಕರ ಮೆನ ಬಾಗಿಲಿಗೆ ತೆರಳಿ ವಿತರಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಫಲಾನುಭವಿಗಳ ಕುಟುಂಬದವರಿಗೆ ವಿತರಿಸಬೇಕಾಗಿದ್ದು, ಈ ಬಗ್ಗೆ ಜಿ.ಪಿ.ಎಸ್ ಪೋಟೋ ಸಹ ತೆಗೆದುಕೊಳ್ಳಬೇಕಾಗಿದ್ದು, ಯಾವುದೇ ಹಂತದಲ್ಲೂ ಕಾರ್ಯಕ್ರಮದ ಉದ್ದೇಶವು ವಿಫಲವಾಗದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ.

ಈ ಪ್ರಮಾಣ ಪತ್ರದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ -2026 ರ ಕುರಿತು ಅರಿವು ಮೂಡಿಸುವ ಮಾಹಿತಿಯನ್ನೂ ಕೂಡಾ ಸಾರ್ವಜನಿಕರಿಗೆ ನೀಡಲಾಗುತ್ತಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ, ಅಗತ್ಯವೆಂದು ಕಂಡುಬಂದಲ್ಲಿ ಭಾರತ ಚುನಾವಣಾ ಆಯೋಗವು ಮತಗಟ್ಟೆ ಮಟ್ಟದ ಅಧಿಕಾರಿ ಮೂಲಕ ನೋಟಿಸ್ ನೀಡಿ ಹೆಚ್ಚುವರಿ ಮಾಹಿತಿಯನ್ನು ಕೇಳಬಹುದು.

 ಅಂತಹ ಸಂದರ್ಭದಲ್ಲಿ, ಚುನಾವಣಾ ಆಯೋಗವು ಸೂಚಿಸಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಅನ್ವಯಿಸುವಲ್ಲಿ ಜಾತಿ ಪ್ರಮಾಣ ಪತ್ರ ಸೇರಿದಂತೆ, ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಅರ್ಹತೆಯನ್ನು ದೃಢೀಕರಿಸಬಹುದು.

ಶಾಲಾ-ಕಾಲೇಜು ಪ್ರವೇಶದಲ್ಲಿ ಮೀಸಲಾತಿ ಸೌಲಭ್ಯ ಪಡೆಯುವುದರಿಂದ ಹಿಡಿದು, ವಿದ್ಯಾರ್ಥಿವೇತನ, ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಮೀಸಲಾತಿ ಹಾಗೂ ಶುಲ್ಕ ವಿನಾಯಿತಿಯವರೆಗೆ ಎಲ್ಲದಕ್ಕೂ ಈ ಪ್ರಮಾಣಪತ್ರ ಬೇಕಾಗುತ್ತದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನ, ಹಾಸ್ಟೆಲ್ ಪ್ರವೇಶ, ಪ್ರೀ-ಮೆಟ್ರಿಕ್ ಮತ್ತು ಪೋಸ್ಟ್-ಮೆಟ್ರಿಕ್ ಸ್ಕಾಲರ್‌ಶಿಪ್ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಜಾತಿ ಪ್ರಮಾಣಪತ್ರ ಕಡ್ಡಾಯವಾಗಿ ಕೇಳಲಾಗುತ್ತದೆ.

ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶುಲ್ಕ ವಿನಾಯಿತಿ, ವಯೋಮಿತಿ ಸಡಿಲಿಕೆ ಪಡೆಯಲೂ ಇದೇ ದಾಖಲೆ ಆಧಾರ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಮೀಸಲು ಸ್ಥಾನಗಳಿಂದ ಸ್ಪರ್ಧಿಸಬೇಕಾದರೂ ಜಾತಿ ಪ್ರಮಾಣಪತ್ರ ಅಗತ್ಯ. ಸಹಕಾರಿ ಬ್ಯಾಂಕ್, ಕೃಷಿ ಸಾಲ, ವಸತಿ ಯೋಜನೆಗಳಂತಹ ಹಲವು ಸರ್ಕಾರಿ ಸೌಲಭ್ಯಗಳಲ್ಲಿ ಪ್ರವರ್ಗಕ್ಕೆ ಅನುಗುಣವಾಗಿ ಸಬ್ಸಿಡಿ ಪಡೆಯಲೂ ಇದೇ ದಾಖಲೆ ಬೇಕಾಗುತ್ತದೆ. ಒಟ್ಟಿನಲ್ಲಿ ಶಾಲಾ ಪ್ರವೇಶದಿಂದ ಹಿಡಿದು ನಿವೃತ್ತಿಯ ನಂತರದ ಸೌಲಭ್ಯಗಳವರೆಗೆ, ಜೀವನದ ಪ್ರತಿ ಹಂತದಲ್ಲೂ ಈ ಪ್ರಮಾಣಪತ್ರದ ಪಾತ್ರ ಇರುತ್ತದೆ.

ಜಿಲ್ಲೆಯಲ್ಲಿ ಜಾತಿ ಮತ್ತು ಅದಾಯ ಪ್ರಮಾಣ ಪತ್ರಗಳನ್ನು ಉಚಿತವಾಗಿ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ವಿತರಿಸುವ ಕಾರ್ಯವು ಆರಂಭದಲ್ಲಿ ನಿಧಾನಗತಿಯಲ್ಲಿದ್ದು, ನಂತರ ಈ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಿ, ಒತ್ತು ನೀಡಿ ವಿತರಣೆ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಶೀಘ್ರದಲ್ಲಿ ಶೇ.100ರಷ್ಟು ವಿತರಣೆ ಮಾಡಲಾಗುವುದು.

– ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾಧಿಕಾರಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share