125 ಮಾನವ ದಿನಗಳ ಉದ್ಯೋಗ; ಜಾಬ್ ಕಾರ್ಡ್ ಮೇಳದಲ್ಲಿ ಇಒ ದಾಸನಕೊಪ್ಪ ಮಾಹಿತಿ
ಮುಂಡಗೋಡ: ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ರೈತರಿಗೆ ಅತ್ತ ಜಮೀನಿನಲ್ಲಿ ಕೃಷಿ ಕೆಲಸವೂ ಇಲ್ಲ, ಇತ್ತ ಸ್ವಂತ ಉದ್ಯೋಗವೂ ಇಲ್ಲ. ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರಿಗೆ ವಿಬಿ-ಜಿ ರಾಮ್-ಜಿ ಯೋಜನೆ ಹೊಸ ಭರವಸೆಯಾಗಿದೆ ಎಂದು ಮುಂಡಗೋಡ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ ಮಾಹಿತಿ ನೀಡಿದರು.
ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಯನಕೊಪ್ಪ ಲಂಬಾಣಿ ತಾಂಡಾದಲ್ಲಿ ಆಯೋಜಿಸಿದ್ದ ಜಾಬ್ ಕಾರ್ಡ್ ಮೇಳದಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನರು ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜುಲೈ 1ರಿಂದ ಜಾರಿಗೆ ಬಂದಿರುವ ವಿಬಿ-ಜಿ ರಾಮ್-ಜಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಗಳಿಗೆ ವರ್ಷಕ್ಕೆ 125 ಮಾನವ ದಿನಗಳ ಉದ್ಯೋಗ ಪಡೆಯುವ ಅವಕಾಶವಿದೆ. ಗಂಡು ಮತ್ತು ಹೆಣ್ಣು ಕಾರ್ಮಿಕರಿಗೆ ಸಮಾನವಾಗಿ ದಿನಕ್ಕೆ ₹382 ಕೂಲಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ದೀರ್ಘಕಾಲಿಕ ಸಮುದಾಯ ಕಾಮಗಾರಿಗಳು ಹಾಗೂ ಜನರ ಆರ್ಥಿಕ ಭದ್ರತೆಗೆ ನೆರವಾಗುವ ವೈಯಕ್ತಿಕ ಸೌಲಭ್ಯಗಳು ಸೇರಿದಂತೆ ಒಟ್ಟು 318 ಬಗೆಯ ಅನುಮೋದಿತ ಕಾಮಗಾರಿಗಳು ಯೋಜನೆಯಲ್ಲಿವೆ. ಹೀಗಾಗಿ ಉದ್ಯೋಗಕ್ಕಾಗಿ ಗ್ರಾಮ ತೊರೆದು ಪಟ್ಟಣಗಳಿಗೆ ವಲಸೆ ಹೋಗುವ ಬದಲು ಸ್ವಂತ ಊರಿನಲ್ಲಿಯೇ ಕೆಲಸ ಪಡೆದು ಜೀವನ ಸಾಗಿಸಲು ಯೋಜನೆ ಸಹಕಾರಿಯಾಗಲಿದೆ ಎಂದರು.
ಯೋಜನೆಯ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡುವುದರ ಜೊತೆಗೆ ಸ್ಥಳದಲ್ಲಿಯೇ ಹೊಸದಾಗಿ ಉದ್ಯೋಗ ಚೀಟಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಅರ್ಹ ಕುಟುಂಬಗಳಿಗೆ ಗ್ರಾಮೀಣ ರೋಜಗಾರ್ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಲಾಯಿತು.
ಈ ವೇಳೆ ಇ-ಕೆವೈಸಿ ಬಾಕಿ ಉಳಿಸಿಕೊಂಡಿದ್ದ ಕೂಲಿಕಾರರ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಉದ್ಯೋಗ ಚೀಟಿಗೆ ಹೊಸ ಸದಸ್ಯರ ಹೆಸರು ಸೇರ್ಪಡೆ ಸೇರಿದಂತೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣಪತಿ ಪಿಲ್ಲೋಜಿ, ಗ್ರಾಪಂ ಮಾಜಿ ಸದಸ್ಯ ಪ್ರದೀಪ್ ಚವ್ಹಾಣ, ತಾಂತ್ರಿಕ ಸಂಯೋಜಕ ಅಲೋಕ್ ನಾಯ್ಕ, ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ, ಸಾಮಾಜಿಕ ಲೆಕ್ಕ ಪರಿಶೋಧನೆ ಸಂಯೋಜಕ ಮಾರುತಿ, ಡಿಇಒ ಮಂಜುನಾಥ್ ಮಾಯಣ್ಣನವರ, ಬಿಎಫ್‌ಟಿ ಯುವರಾಜ್, ಮಂಜುನಾಥ್ ಸೇರಿದಂತೆ ಅಧಿಕಾರಿಗಳು, ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.