ಒಂದು ವಿಚಿತ್ರ ಕಾಯಿಲೆ ಇದೆ… ಇದಕ್ಕೆ ಮಾತ್ರ ಡಾಕ್ಟರ್ ಹತ್ತಿರ ಹೋದರೂ ಔಷಧಿ ಸಿಗಲ್ಲ. ಮಾತ್ರೆ ತಿಂದರೂ ಕಡಿಮೆಯಾಗಲ್ಲ. ವಯಸ್ಸಾದಂತೆ ಹೋಗುತ್ತೆ ಅಂದುಕೊಂಡರೆ, ಕೆಲವೊಮ್ಮೆ ವಯಸ್ಸಾದವರಿಗೂ ಇರುತ್ತೆ! ಕಾಯಿಲೆಯ ಹೆಸರು “ಜನ ಏನಂತಾರೆ?”
ನಮ್ಮಲ್ಲಿ ಎಷ್ಟು ಜನ ಈ ಕಾಯಿಲೆಯಿಂದ ಒಳ್ಳೆಯ ಒಳ್ಳೆಯ ಕನಸುಗಳನ್ನೇ ಅರ್ಧಕ್ಕೆ ಬಿಟ್ಟುಬಿಟ್ಟಿದ್ದೀವಿ ಗೊತ್ತಾ? ಒಂದು ಹೆಣ್ಣುಮಗಳಿಗೆ ತನ್ನದೇ ಆದ ಪುಟ್ಟ ಕ್ಯಾಂಟೀನ್ ಮಾಡಬೇಕು. ನಾಲ್ಕು ಜನರಿಗೆ ತಿಂಡಿ ಮಾಡಿ ಕೊಟ್ಟು, ತನ್ನ ಕೈಯಿಂದ ನಾಲ್ಕು ಕಾಸು ಸಂಪಾದಿಸಬೇಕು, ಯಾರನ್ನೂ ಕೇಳದೆ ತನ್ನ ಖರ್ಚನ್ನು ತಾನೇ ನೋಡಿಕೊಳ್ಳಬೇಕು ಅನ್ನೋ ಆಸೆ.
ಆದರೆ ಅಂಗಡಿ ಇಟ್ಟರೆ ಪರಿಚಯದವರು ಏನಂದುಕೊಳ್ತಾರೆ? ಇವಳಿಗೇನು ಕಡಿಮೆ ಇತ್ತು ಅಂತ ಆಡಿಕೊಂಡ್ರೆ? ಅನ್ನೋ ಯೋಚನೆ ಬಂದು, ಕೊನೆಗೆ ಕ್ಯಾಂಟೀನ್ ಬದಲು ಕನಸನ್ನೇ ಮುಚ್ಚಿಬಿಡುತ್ತಾಳೆ. ಒಬ್ಬ ರೈತನಿಗೆ ತನ್ನ ಹೊಲದಲ್ಲಿ ಬೆಳೆದ ಬೆಳೆಗೆ ಊರಿನಲ್ಲೇ ಬೆಲೆ ಸಿಗುತ್ತಿಲ್ಲ. ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ತಾನೇ ರಸ್ತೆ ಬದಿಯಲ್ಲಿ ನಿಂತು ಮಾರಿದರೆ ಒಂದಷ್ಟು ಲಾಭ ಸಿಗಬಹುದು ಅನ್ನೋ ಲೆಕ್ಕ ಅವನ ತಲೆಯಲ್ಲಿದೆ.
ಆದರೆ, ನಮ್ಮೂರಿನವರು ನೋಡಿದರೆ ಏನಂದುಕೊಳ್ತಾರೆ ಅನ್ನೋ ಭಯ ಅದಕ್ಕಿಂತ ದೊಡ್ಡದಾಗಿಬಿಡುತ್ತದೆ. ವಿಚಿತ್ರ ಅಲ್ವಾ? ನಮ್ಮ ಹೊಟ್ಟೆ ತುಂಬಿಸಲು ನಾವು ದುಡಿಯುವುದಕ್ಕೆ ನಾಚಿಕೆ. ಆದರೆ, ನಮ್ಮ ಬಗ್ಗೆ ಮಾತಾಡುವವರು ಯಾರು, ಅವರು ಏನು ಮಾಡ್ತಿದ್ದಾರೆ ಅನ್ನೋದನ್ನ ಮಾತ್ರ ನಾವು ಯೋಚಿಸುತ್ತೇವೆ!
ಒಮ್ಮೆ ಯೋಚಿಸಿ ನೋಡಿ… ನೀವು ಕಷ್ಟದಲ್ಲಿದ್ದಾಗ ಜನ ಬಂದು ನಿಮ್ಮ ಸಾಲ ತೀರಿಸಿದ್ದಾರಾ? ನಿಮ್ಮ ಮಕ್ಕಳ ಫೀಸ್ ಕಟ್ಟಿದ್ದಾರಾ? ನಿಮ್ಮ ಮನೆಯ ಖರ್ಚು ನೋಡಿಕೊಂಡಿದ್ದಾರಾ? ನೀವು ಸೋತಾಗ ನಿಮ್ಮ ಪಕ್ಕದಲ್ಲಿ ನಿಂತಿದ್ದಾರಾ? ಬಹುತೇಕ ಸಂದರ್ಭಗಳಲ್ಲಿ ಇಲ್ಲ. ಆದರೂ ಅವರ ನಾಲ್ಕು ಮಾತುಗಳಿಗೋಸ್ಕರ ನಾವು ನಮ್ಮ ನಾಲ್ಕು ವರ್ಷದ ಕನಸನ್ನೇ ಬಲಿಕೊಡುತ್ತೇವೆ. ನಿಜ ಹೇಳಬೇಕೆಂದರೆ, ನಮ್ಮನ್ನು ಆಡಿಕೊಳ್ಳುವವರಲ್ಲಿ ಬಹಳಷ್ಟು ಜನ ನಮ್ಮ ಕಷ್ಟಕ್ಕೆ ಬರುವವರಲ್ಲ. ನಾವು ಒಂದು ಹೆಜ್ಜೆ ಮುಂದೆ ಹೋಗದಂತೆ ಹಿಂದೆ ಎಳೆಯುವವರಷ್ಟೇ.
ನೀವು ಒಂದು ಕೆಲಸ ಶುರು ಮಾಡಿದರೆ ಮೊದಲಿಗೆ ನಗುತ್ತಾರೆ. ಸ್ವಲ್ಪ ಬೆಳೆದರೆ ಅನುಮಾನಪಡುತ್ತಾರೆ. ಇನ್ನಷ್ಟು ಬೆಳೆದರೆ ಸಲಹೆ ಕೊಡುತ್ತಾರೆ. ಗೆದ್ದ ಮೇಲೆ ನಮಗೆ ಮೊದಲೇ ಗೊತ್ತಿತ್ತು ಇವನು ಮಾಡ್ತಾನೆ ಅಂತ! ಅಂತ ಹೇಳುತ್ತಾರೆ. ಹಾಗಾದರೆ ಮೊದಲಿನಿಂದಲೇ ಅವರ ಮಾತಿಗೆ ಯಾಕೆ ಹೆದರಬೇಕು? ಜನರ ಬಾಯಿ ಮುಚ್ಚಿಸುವುದು ನಮ್ಮ ಕೆಲಸ ಅಲ್ಲ. ನಮ್ಮ ಜೀವನದ ಬಾಗಿಲು ತೆರೆಯುವುದು ನಮ್ಮ ಕೆಲಸ.
ನಿಮಗೆ ಕ್ಯಾಂಟೀನ್ ಇಡಬೇಕು ಅನ್ನಿಸಿದರೆ ಇಡಿ. ಚಿಕ್ಕದಾಗಿರಲಿ, ನಾಲ್ಕು ಟೇಬಲ್ ಇರಲಿ, ಒಂದು ಸ್ಟೌವ್ ಇರಲಿ… ಆದರೆ ಅದು ನಿಮ್ಮದು. ರೈತನಿಗೆ ತನ್ನ ಬೆಳೆಯನ್ನು ತಾನೇ ಮಾರಬೇಕು ಅನ್ನಿಸಿದರೆ ಮಾರಲಿ. ರಸ್ತೆ ಬದಿಯಲ್ಲೇ ನಿಂತರೂ ಪರವಾಗಿಲ್ಲ. ನಿಮ್ಮ ಕೈಯಿಂದ ಬೆಳೆದದ್ದನ್ನು ನಿಮ್ಮ ಕೈಯಿಂದ ಮಾರಾಟ ಮಾಡುತ್ತಿದ್ದೀರಿ ಅಷ್ಟೇ. ಅದರಲ್ಲಿ ನಾಚಿಕೆಪಡುವಂಥದ್ದು ಏನಿದೆ? ದುಡಿಮೆಗೆ ಯಾವತ್ತೂ ಕೀಳರಿಮೆ ಇಲ್ಲ.
ಕೊನೆಗೆ ಒಂದು ಸಣ್ಣ ಸತ್ಯ ನೆನಪಿಟ್ಟುಕೊಳ್ಳಿ. ಜನ ನಿಮ್ಮ ಬಗ್ಗೆ ಮಾತಾಡೋದು ಅವರ ಕೆಲಸ. ಆ ಮಾತು ಕೇಳಿ ನಿಮ್ಮ ಬದುಕನ್ನೇ ಬದಲಿಸಿಕೊಳ್ಳೋದು ಮಾತ್ರ ನಿಮ್ಮ ತಪ್ಪು. ನೀವು ಏನೂ ಮಾಡದೆ ಕುಳಿತರೂ ಜನ ಮಾತನಾಡುತ್ತಾರೆ. ಏನಾದರೂ ಮಾಡಿದರೂ ಮಾತನಾಡುತ್ತಾರೆ. ಗೆದ್ದರೂ ಮಾತನಾಡುತ್ತಾರೆ. ಹಾಗಿದ್ದ ಮೇಲೆ, ಕನಿಷ್ಠ ನಿಮ್ಮ ಮನಸ್ಸಿಗೆ ಇಷ್ಟವಾದ ಕೆಲಸ ಮಾಡಿ ಮಾತು ಕೇಳೋಣ.
ಈಗಲೇ ಒಂದು ಪ್ರಶ್ನೆ ಕೇಳಿಕೊಳ್ಳಿ. ಜನ ಏನಂತಾರೆ ಅನ್ನೋ ಭಯದಿಂದ ನಾನು ಏನನ್ನು ಮಾಡದೆ ಬಿಟ್ಟಿದ್ದೇನೆ? ಉತ್ತರ ಸಿಕ್ಕರೆ, ಇವತ್ತೇ ಅದರ ಕಡೆಗೆ ಒಂದು ಸಣ್ಣ ಹೆಜ್ಜೆ ಇಡಿ. ಯಾಕೆಂದರೆ, ನಿಮ್ಮ ಜೀವನದ ಕಥೆ ಬರೆಯೋ ಪೆನ್ ನಿಮ್ಮ ಕೈಯಲ್ಲಿದೆ. ಅದನ್ನು ಪಕ್ಕದ ಮನೆಯವರ ಕೈಗೆ ಕೊಟ್ಟು, ಅವರು ಏನು ಬರೆಯಬೇಕು ಅಂತ ಕಾಯಬೇಡಿ.
ಜನ ಮಾತಾಡ್ತಾರೆ, ನೀವು ಮುಂದೆ ಹೋಗಿ!
ಶುಭೋದಯ.