Monday, September 7, 2026
Join WhatsApp Group
HomeLocal Newsದಶಕ ಕಳೆದರೂ ಇಲಾಖೆಗೆ ಕುರುಡು!

ದಶಕ ಕಳೆದರೂ ಇಲಾಖೆಗೆ ಕುರುಡು!

ಜಂಬೇಸಾಲ ಬಳಿ ಅಪಾಯಕಾರಿ ಗಟಾರ: ಸೂಚನಾ ಫಲಕವಾದರೂ ಅಳವಡಿಸಿ

ಯಲ್ಲಾಪುರ: ರಸ್ತೆಯಲ್ಲಿ ಸಂಚರಿಸುವಾಗ ಅಚಾತುರ್ಯದಿಂದ ವಾಹನದ ಚಕ್ರ ರಸ್ತೆಯಂಚಿಗೆ ಇಳಿದರೆ ಸಾಕು, ಮುಂದೇನಾಗುತ್ತದೆ ಎಂಬುದನ್ನು ಊಹಿಸುವುದೂ ಕಷ್ಟ. ಯಲ್ಲಾಪುರದಿಂದ ಶಿರಸಿಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ, ಪಟ್ಟಣದಿಂದ ಸುಮಾರು 9 ಕಿ.ಮೀ. ದೂರದ ಜಂಬೇಸಾಲ ಸಮೀಪ ಇಂತಹದ್ದೊಂದು ಅಪಾಯಕಾರಿ ಸ್ಥಳವಿದೆ.

ದೂರದಿಂದ ನೋಡಿದರೆ ರಸ್ತೆಯ ಭಾಗದಂತೆಯೇ ಕಾಣಿಸುವ ಈ ಸ್ಥಳದಲ್ಲಿ ರಸ್ತೆಯಂಚಿಗೆ ಹೊಂದಿಕೊಂಡಿರುವ ತೆರೆದ ಗಟಾರವೇ ಇದೀಗ ವಾಹನ ಸವಾರರಿಗೆ ಅಪಾಯದ ಆಹ್ವಾನ ನೀಡುತ್ತಿದೆ.

ಯಲ್ಲಾಪುರದಿಂದ ಜಂಬೇಸಾಲಿನ ಕಡೆಗೆ ಸಾಗುವಾಗ ಡಾಂಬರು ರಸ್ತೆಯ ಎಡಭಾಗದಲ್ಲೇ ಈ ಗಟಾರವಿದೆ. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಮಳೆ ನೀರು ಹರಿಯುವ ವ್ಯವಸ್ಥೆ ಕಲ್ಪಿಸುವ ಸಂದರ್ಭದಲ್ಲಿ ಸೂಕ್ತ ಪೈಪ್ ಅಳವಡಿಸದೆ, ಗಟಾರವನ್ನು ತೆರೆದ ಸ್ಥಿತಿಯಲ್ಲೇ ಬಿಡಲಾಗಿದೆ ಎಂಬುದು ಸ್ಥಳೀಯರ ಆರೋಪ.

ರಸ್ತೆ ಅಗಲೀಕರಣದ ಜತೆಗೆ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಹಾಗೂ ವಾಹನ ಸವಾರರ ಸುರಕ್ಷತೆಯನ್ನೂ ಸಮನ್ವಯಗೊಳಿಸಲಾಗಿದೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ವಿಶೇಷವಾಗಿ ಕಂಚನಹಳ್ಳಿ ತಿರುವಿನ ಕೊಂಚ ಹಿಂದಿನ ಈ ಭಾಗದಲ್ಲಿ ಶಿರಸಿ ಕಡೆಗೆ ಸಾಗುವ ವಾಹನ ಅಚಾತುರ್ಯದಿಂದ ಡಾಂಬರು ರಸ್ತೆಯ ಎಡಭಾಗದಿಂದ ಕೆಳಕ್ಕೆ ಇಳಿದರೆ ಅಪಾಯ ಎದುರಾಗುವ ಸಾಧ್ಯತೆ ಇದೆ. ದೊಡ್ಡ ವಾಹನಗಳ ಚಕ್ರ ರಸ್ತೆಯಂಚಿನಿಂದ ಕೇವಲ ಒಂದು ಅಡಿ ಕೆಳಗೆ ಇಳಿದರೂ ವಾಹನದ ನಿಯಂತ್ರಣ ತಪ್ಪುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮಳೆಗಾಲದಲ್ಲಿ ಈ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಅದರಲ್ಲೂ ರಾತ್ರಿ ವೇಳೆ ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕಿನಿಂದ ರಸ್ತೆಯಂಚಿನ ಈ ಅಪಾಯಕಾರಿ ಭಾಗ ಸರಿಯಾಗಿ ಗೋಚರಿಸದೇ ಹೋಗಬಹುದು. ಅಂತಹ ಸಂದರ್ಭದಲ್ಲಿ ದನಕರುಗಳು ಅಥವಾ ಇತರ ಅಡೆತಡೆಗಳು ರಸ್ತೆಗೆ ಅಡ್ಡ ಬಂದಾಗ ವಾಹನವನ್ನು ತಕ್ಷಣ ಎಡಕ್ಕೆ ತಿರುಗಿಸಬೇಕಾದ ಅನಿವಾರ್ಯತೆ ಎದುರಾದರೆ, ಈ ತೆರೆದ ಗಟಾರ ದೊಡ್ಡ ಅಪಘಾತಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಎರಡು ದಿನಗಳ ಹಿಂದೆ ರಸ್ತೆಯಲ್ಲಿ ದನಕರುಗಳು ಅಡ್ಡ ಬಂದ ಸಂದರ್ಭದಲ್ಲಿ ಇದೇ ಸ್ಥಳದಲ್ಲಿ ವಾಹನವನ್ನು ತಕ್ಷಣ ಬದಿಗೆ ಇಳಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಸ್ವಲ್ಪದರಲ್ಲೇ ಅಪಾಯ ತಪ್ಪಿದೆ ಎನ್ನುವ ಅನುಭವವನ್ನು ಸ್ಥಳೀಯರೊಬ್ಬರು ಹಂಚಿಕೊಂಡಿದ್ದಾರೆ.

ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಸ್ಥಳವನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಳೆ ನೀರು ಸರಾಗವಾಗಿ ಹರಿಯುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ. ಅದು ತಕ್ಷಣ ಸಾಧ್ಯವಾಗದಿದ್ದರೂ, ಕನಿಷ್ಠ ದೂರದಿಂದಲೇ ವಾಹನ ಸವಾರರಿಗೆ ಗೋಚರಿಸುವಂತೆ ‘ಅಪಾಯಕಾರಿ ಸ್ಥಳ’, ‘ರಸ್ತೆಯಂಚಿನಲ್ಲಿ ವಾಹನ ಇಳಿಸಬೇಡಿ’ ಎಂಬ ಎಚ್ಚರಿಕೆಯ ಸೂಚನಾ ಫಲಕವನ್ನಾದರೂ ಅಳವಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ರಸ್ತೆಯ ಅಭಿವೃದ್ಧಿ ಎಂದರೆ ಕೇವಲ ಡಾಂಬರೀಕರಣ ಮತ್ತು ಅಗಲೀಕರಣವಲ್ಲ. ಆ ರಸ್ತೆಯಲ್ಲಿ ಸುರಕ್ಷಿತವಾಗಿ ಸಂಚರಿಸುವ ವ್ಯವಸ್ಥೆಯೂ ಅದರ ಭಾಗವೇ. ದಶಕಗಳಿಂದ ಗಮನ ಸೆಳೆಯದಿರುವ ಈ ಅಪಾಯಕಾರಿ ಸ್ಥಳದಲ್ಲಿ ಮುನ್ನೆಚ್ಚರಿಕೆ ಕೈಗೊಂಡು, ಅಪಘಾತ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವ ಪರಿಸ್ಥಿತಿ ಬರದಂತೆ ಸಂಬಂಧಪಟ್ಟ ಇಲಾಖೆ ಈಗಲೇ ಕ್ರಮ ಕೈಗೊಳ್ಳಬೇಕಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share