Monday, September 7, 2026
Join WhatsApp Group
HomeLocal Newsನದಿತಿರುವು; ಜಂಟಿ ಜಲವಿಜ್ಞಾನ ಅಧ್ಯಯನಕ್ಕೆ ಒತ್ತಾಯ

ನದಿತಿರುವು; ಜಂಟಿ ಜಲವಿಜ್ಞಾನ ಅಧ್ಯಯನಕ್ಕೆ ಒತ್ತಾಯ

ಬೆಂಗಳೂರು: ಪ್ರಸ್ತಾಪಿತ ಬೇಡ್ತಿ–ಹಿರೇವಡ್ಡತ್ತಿ ನದಿ ತಿರುವು ಯೋಜನೆಯನ್ನು ಮುಂದುವರಿಸುವ ಮುನ್ನ ಉತ್ತರ ಕನ್ನಡ ಜಿಲ್ಲೆಯ ವಾಸ್ತವಿಕ ಜಲಲಭ್ಯತೆ, ಪರಿಸರ ಪರಿಣಾಮ ಹಾಗೂ ಸ್ಥಳೀಯ ನೀರಿನ ಅಗತ್ಯಗಳ ಕುರಿತು ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಜ್ಞರ ತಂಡ ಒತ್ತಾಯಿಸಿದೆ.

ಯೋಜನೆ ಕುರಿತು ಸಂಸದ ಕಾಗೇರಿ ನೇತೃತ್ವದಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಜಲಸಂಪನ್ಮೂಲ ತಜ್ಞರು ಹಾಗೂ ರೈತ ಪ್ರತಿನಿಧಿಗಳ ಸಭೆ ಬೆಂಗಳೂರಿನಲ್ಲಿ ನಡೆಯಿತು. ಯೋಜನೆಯ ಪೂರ್ವ ಕಾರ್ಯಸಾಧ್ಯತಾ ವರದಿ (PFR)ಯಲ್ಲಿನ ಅಂಕಿ-ಅಂಶಗಳು, ಪರಿಸರದ ಮೇಲಿನ ಪರಿಣಾಮ ಹಾಗೂ ಆರ್ಥಿಕ ಕಾರ್ಯಸಾಧ್ಯತೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಉತ್ತರ ಕನ್ನಡ ಜಿಲ್ಲೆಯ ಭಾರಧಾರಣಾ ಸಾಮರ್ಥ್ಯ (Carrying Capacity) ಅಧ್ಯಯನ ನಡೆಸದೇ DPR ಸಿದ್ಧಪಡಿಸುವುದು ಸೂಕ್ತವಲ್ಲ. ಕಳೆದ ಮೂರು ದಶಕಗಳಲ್ಲಿ ಜಿಲ್ಲೆಯ ಜನಸಂಖ್ಯೆ, ಕೃಷಿ ಪದ್ಧತಿ ಹಾಗೂ ನೀರಿನ ಬಳಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕುಡಿಯುವ ನೀರಿನ ಯೋಜನೆಗಳು ಮತ್ತು ಸಣ್ಣ ನೀರಾವರಿ ಬಾಂದಾರಗಳಿಂದ ಸ್ಥಳೀಯ ನೀರಿನ ಬಳಕೆಯೂ ಹೆಚ್ಚಾಗಿದೆ. ಇವುಗಳನ್ನು PFRನಲ್ಲಿ ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಆಕ್ಷೇಪಿಸಲಾಯಿತು.

ಇತ್ತೀಚಿನ ವರ್ಷಗಳಲ್ಲಿ ಮಳೆಯ ಸ್ವರೂಪದಲ್ಲೂ ಬದಲಾವಣೆಯಾಗಿದ್ದು, ಹಲವು ತಿಂಗಳುಗಳಲ್ಲಿ ಹಂಚಿಕೆಯಾಗಿ ಬೀಳಬೇಕಿದ್ದ ಮಳೆ ಕೆಲವೇ ದಿನಗಳಲ್ಲಿ ಸುರಿಯುತ್ತಿರುವುದರಿಂದ ನದಿಗಳ ಜಲಲಭ್ಯತೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಹವಾಮಾನ ವೈಪರೀತ್ಯವನ್ನೂ ಯೋಜನೆಯ ಅಧ್ಯಯನದಲ್ಲಿ ಪರಿಗಣಿಸಬೇಕು ಎಂದು ವನ್ಯಜೀವಿ ತಜ್ಞ ಬಾಲಚಂದ್ರ ಸಾಯಿಮನೆ ಹೇಳಿದರು.

ಯೋಜನೆಗೆ ವಾಸ್ತವವಾಗಿ ಎಷ್ಟು ನೀರು ಲಭ್ಯವಿದೆ ಮತ್ತು ಪರಿಸರ ಹಾಗೂ ಆರ್ಥಿಕ ದೃಷ್ಟಿಯಿಂದ ಯೋಜನೆ ಕಾರ್ಯಸಾಧ್ಯವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದರು.

ಜಲಸಂಪನ್ಮೂಲ ತಜ್ಞ ವಿ.ಆರ್. ಹೆಗಡೆ ಅವರು PFRನಲ್ಲಿ ನೀರಿನ ಆವಿಯಾಗುವಿಕೆ ಸೇರಿದಂತೆ ಕೆಲವು ಪ್ರಮುಖ ಜಲವಿಜ್ಞಾನ ಅಂಶಗಳನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು.

ಕೃಷಿ ವಿಜ್ಞಾನಿ ಡಾ. ರಾಜೇಂದ್ರ ಹೆಗಡೆ ಅವರು ಕಪ್ಪು ಮಣ್ಣಿನ ಪ್ರದೇಶಕ್ಕೆ ಅತಿಯಾದ ನೀರಾವರಿ ನೀಡಿದರೆ ಮಣ್ಣು ಕ್ಷಾರೀಯವಾಗುವ ಅಪಾಯವಿದೆ ಎಂದು ಎಚ್ಚರಿಸಿದರಲ್ಲದೆ, ಮಣ್ಣಿನ ಪುನಶ್ಚೇತನಕ್ಕೆ ತಗಲುವ ವೆಚ್ಚವನ್ನೂ ಯೋಜನೆಯ ಲಾಭ–ವೆಚ್ಚದ ಅನುಪಾತದಲ್ಲಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಹತ್ತುಕ್ಕೂ ಹೆಚ್ಚು ಅಣೆಕಟ್ಟುಗಳಿದ್ದು, ಮತ್ತಷ್ಟು ಪರಿಸರ ಭಾರ ಹೊರಿಸುವ ಮುನ್ನ ಸಮಗ್ರ ಪರಿಶೀಲನೆ ಅಗತ್ಯ ಎಂದು ಅನಂತ ಹೆಗಡೆ ಅಶೀಸರ ಹೇಳಿದರು. ಯೋಜನೆಯ ಅವಧಿ ಮತ್ತು ವೆಚ್ಚ ಹೆಚ್ಚಾದರೆ ಲಾಭ–ವೆಚ್ಚದ ಅನುಪಾತವೂ ಬದಲಾಗುವುದರಿಂದ ಅದನ್ನೂ ಮರುಪರಿಶೀಲಿಸಬೇಕು ಎಂದು ರೈತ ಪ್ರತಿನಿಧಿ ನಾರಾಯಣ ಗಡಿಕೈ ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share