ಸಿದ್ದಾಪುರ: ತಾಲೂಕಿನ ಹುಲಿಮನೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಾಟ ಆಡುತ್ತಿದ್ದ ವೇಳೆ ಸಿದ್ದಾಪುರ ಪೊಲೀಸರು ದಾಳಿ ನಡೆಸಿದ್ದು, ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆ.20ರಂದು ಸಂಜೆ 5 ಗಂಟೆ ಸುಮಾರಿಗೆ ಹುಲಿಮನೆ ಗ್ರಾಮದ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ 5–6 ಮಂದಿ ಸೇರಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಐ (ಎಲ್ & ಓ) ಶಾಂತಿನಾಥ ಕೆ. ಪಾಸಾನೆ ಅವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದರು.
ದಾಳಿಯ ವೇಳೆ ಹುಲಿಮನೆ ನಿವಾಸಿ ಸತೀಶ ಕನ್ನಾ ಗೌಡ ಎಂಬಾತ ಸಿಕ್ಕಿಬಿದ್ದಿದ್ದು, ಆತನಿಂದ 800 ರೂ ನಗದು ಹಾಗೂ 25 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯ ಸಂದರ್ಭದಲ್ಲಿ ಉಳಿದ ಐವರು ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಸಿದ್ದಾಪುರ ತಾಲೂಕಿನ ಬಿಳಗಿ ವ್ಯಾಪ್ತಿಯ ಹುಲಿಮನೆ ಗ್ರಾಮದ ಗಿರೀಶ ಅನಂತ ಗೌಡ, ಗೋಪಾಲ ರಾಮಾ ಗೌಡ, ಕೆರಿಯಾ ಕರಿಯಾ ಗೌಡ, ಮಂಜುನಾಥ ಗೌಡ ಹಾಗೂ ಗೋಪಾಲ ದೊಡ್ಡಕಟ್ಟೆ ಗೌಡ ಇವರುಗಳನ್ನೂ ಆರೋಪಿಗಳೆಂದು ದಾಖಲಿಸಲಾಗಿದೆ.
ಈ ಕುರಿತು ಪಿಎಸ್ಐ ಶಾಂತಿನಾಥ ಕೆ. ಪಾಸಾನೆ ಅವರು ಸರ್ಕಾರದ ಪರವಾಗಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.