ದಾಂಡೇಲಿ: ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ದಾಂಡೇಲಿ ನಗರ ಪೊಲೀಸರು ನಾಲ್ವರನ್ನು ಬಂಧಿಸಿ, ಸುಮಾರು 241 ಗ್ರಾಂ ಗಾಂಜಾ ಹಾಗೂ 400 ರೂ ನಗದು ವಶಪಡಿಸಿಕೊಂಡಿದ್ದಾರೆ.
ಆ.21ರಂದು ಮಧ್ಯಾಹ್ನ 12.45ರ ಸುಮಾರಿಗೆ ಮಾರುತಿ ನಗರದ ಅಂಬೇಡ್ಕರ್ ಶಾಲೆಯ ಬಳಿಯಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಪಂಚರ ಸಮ್ಮುಖದಲ್ಲಿ ಹಾಗೂ ಮೇಲಾಧಿಕಾರಿಗಳ ಅನುಮತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಮಾರುತಿ ನಗರದ ಅಕ್ಷಯ ಶ್ರೀಕಾಂತ ವಾಡೇಕರ, ಅಡಿಕೆ ಹೊಸೂರು ನಿವಾಸಿ ತೌಸೀಫ್ ನಜೀರ ಅಹಮ್ಮದ್ ಅಜಗಾಂವಕರ, ದಾಂಡೇಲಿ ಟೌನ್ ನಿವಾಸಿ ಸಾಹೀಲ್ ಅನ್ವರ ಶೇಖ್ ಹಾಗೂ ದಾಂಡೇಲಿ ಟೌನ್ ನಿವಾಸಿ ರಾಜೇಶ ದಯಾಶಂಕರ ಯಾದವ ಎಂಬ ನಾಲ್ವರನ್ನು ಬಂಧಿಸಲಾಗಿದೆ.
ಆರೋಪಿತರಿಂದ ಅಂದಾಜು 10 ಸಾವಿರ ರೂ ಮೌಲ್ಯದ 241 ಗ್ರಾಂ ಗಾಂಜಾ, 400 ರೂ ನಗದು ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಡಿವೈಎಸ್ಪಿ ಶಿವಾನಂದ ಮದರಖಂಡಿ ಹಾಗೂ ಸಿಪಿಐ ಶಿವಾನಂದ ಅಂಬಿಗೇರ ಅವರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಅಮೀನ ಎಂ. ಅತ್ತಾರ, ಕಿರಣ್ ಬಿ. ಪಾಟೀಲ್ ಸೇರಿದಂತೆ ದಾಂಡೇಲಿ ನಗರ ಠಾಣೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜಯನಗೌಡ, ಬಸವರಾಜ ತೇಲಸಂಗ, ಕೃಷ್ಣ ಬೆಳ್ಳುವರಿ, ಸುನೀಲ ಲುಗಾಡೆ, ಪ್ರಸನ್ನಕುಮಾರ ಜಿ.ಎನ್., ಬಸವರೆಡ್ಡಿ ವಾಯ್.ಕೆ., ಸಂಜು ಎಮ್ಮಿ, ಪರಶುರಾಮ ನಾಗರಾಳ ಹಾಗೂ ಲೋಕೇಶ ದೆವರೆಡ್ಡಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.