Monday, September 7, 2026
Join WhatsApp Group
HomeAgricultureಅಡಿಕೆಗೂ ಬರಲಿದೆಯೇ ತಂಬಾಕಿನ ಕಾನೂನು?

ಅಡಿಕೆಗೂ ಬರಲಿದೆಯೇ ತಂಬಾಕಿನ ಕಾನೂನು?

>> ಬಾಲಕೃಷ್ಣ ಹೆಗಡೆ, ಶಿರಸಿ

ಇಲ್ಲಿಯವರೆಗಿನ ಎಲ್ಲ ಅಂಶಗಳನ್ನು ಒಟ್ಟಾಗಿ ನೋಡಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ಪಾನ್‌ ಮಸಾಲಾ, ಅಡಿಕೆ, ಗುಟ್ಖಾ ಮುಂತಾದವುಗಳನ್ನು ಆಹಾರ ಉತ್ಪನ್ನಗಳೆಂದು ಪರಿಗಣಿಸಿ ಆಹಾರ ಇಲಾಖೆಯ ನಿಯಂತ್ರಣಕ್ಕೆ ತರಲಾಗಿದೆ. ಇದರ ಪರಿಣಾಮವಾಗಿ ಇಂತಹ ಉತ್ಪನ್ನಗಳ ಮೇಲೆ ನಿರ್ದಿಷ್ಟ ಅವಧಿಗೆ ನಿಷೇಧ ಹೇರುವ ಅಧಿಕಾರವೂ ಇಲಾಖೆಗೆ ಬಂದಿದೆ. ಆದರೆ ಬರೇ ತಂಬಾಕನ್ನು ಆಹಾರವಲ್ಲ, ತಂಬಾಕು ಉತ್ಪನ್ನವೆಂದು ಪರಿಗಣಿಸಿ COTPA ಕಾಯ್ದೆಯ ಅಡಿಯಲ್ಲಿ ನಿಯಂತ್ರಿಸಲಾಗುತ್ತಿದೆ. ಹೀಗಾಗಿ ಸಿಗರೇಟ್‌ನಂತಹ ಉತ್ಪನ್ನಗಳನ್ನು ಕೆಲವು ನಿಯಮಗಳ ಅಡಿಯಲ್ಲಿ ಕಾನೂನುಬದ್ಧವಾಗಿ ಮಾರಾಟ ಮಾಡಬಹುದು.

ಆಹಾರ ಇಲಾಖೆಯ ವಾದವೂ ತನ್ನದೇ ಆದ ರೀತಿಯಲ್ಲಿ ಇದೆ. ಬಾಯಿಯೊಳಗೆ ಇಟ್ಟುಕೊಂಡು ಎಂಜಲಿನೊಂದಿಗೆ ಬೆರೆಸುವುದರಿಂದ ಇದು ಒಂದು ರೀತಿಯಲ್ಲಿ ಸೇವನೆಯಾಗುತ್ತದೆ. ಜೊತೆಗೆ ಆಹಾರ ಸುರಕ್ಷತೆ ಕಾಯ್ದೆಯ ಸೆಕ್ಷನ್ 30(2)(a) ಆರೋಗ್ಯಕ್ಕೆ ಹಾನಿ ಉಂಟುಮಾಡುವ ಉತ್ಪನ್ನಗಳ ತಯಾರಿಕೆ, ಮಾರಾಟ ಮತ್ತು ಸಂಗ್ರಹಣೆಯನ್ನು ನಿಷೇಧಿಸುವ ಅಧಿಕಾರವನ್ನು ನೀಡುತ್ತದೆ ಎನ್ನುವುದು ಇಲಾಖೆಯ ನಿಲುವು. ಇದೇ ಅಧಿಕಾರದ ಆಧಾರದಲ್ಲಿ ಗುಟ್ಖಾ ನಿಷೇಧವಾದಾಗ ಕಂಪೆನಿಗಳು ಪಾನ್‌ ಮಸಾಲಾ ಮತ್ತು ತಂಬಾಕನ್ನು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುವ ‘ಟ್ವಿನ್ ಪ್ಯಾಕ್’ ತಂತ್ರಕ್ಕೆ ಮೊರೆಹೋದರೂ, ಅದನ್ನು ಪತ್ತೆಹಚ್ಚಿ ನಿಯಂತ್ರಿಸುವ ಪ್ರಯತ್ನವೂ ನಡೆಯಿತು.

ಇದನ್ನೂ ಓದಿ… ಗುಟ್ಖಾ ನಿಷೇಧಿಸುವವರು ಸಿಗರೇಟ್ ಬಗ್ಗೆ ಮಾತಾಡುವದಿಲ್ಲ?!

ಆದರೆ ಮತ್ತೊಂದು ಕಡೆ ಕೆಲವು ನ್ಯಾಯಾಲಯಗಳ ತೀರ್ಪುಗಳು ಬೇರೆ ಪ್ರಶ್ನೆಯನ್ನು ಎತ್ತಿವೆ. ತಂಬಾಕು ಪ್ರಚೋದಕ ವಸ್ತುವಾಗಿರಬಹುದು. ಆದರೆ ಅದು ದೇಹಕ್ಕೆ ಪೌಷ್ಟಿಕಾಂಶ ಒದಗಿಸುವ ಆಹಾರವಲ್ಲ. ಹೀಗಿರುವಾಗ ಸಾಮಾನ್ಯ ಆಹಾರ ಸುರಕ್ಷತಾ ನಿಯಮಗಳ ಮೂಲಕ ತಂಬಾಕಿನಂತಹ ಉತ್ಪನ್ನಗಳನ್ನು ನಿರ್ದಿಷ್ಟವಾಗಿ ನಿಯಂತ್ರಿಸುವ COTPA ಕಾಯ್ದೆಯ ಮೇಲೆ ಸವಾರಿ ಮಾಡಬಹುದೇ ಎಂಬ ಪ್ರಶ್ನೆ ಎದುರಾಗುತ್ತದೆ. ಇದೇ ಕಾರಣಕ್ಕೆ ಈ ವಿಚಾರದಲ್ಲಿ ಕಾನೂನು ಗೊಂದಲ ಮುಂದುವರಿದಿದೆ.

ಕೆಲವು ಉಚ್ಚ ನ್ಯಾಯಾಲಯಗಳು ಹಾಗೂ ಸುಪ್ರೀಂ ಕೋರ್ಟ್‌ ಕೂಡ ಬಾಯಿಯ ಕ್ಯಾನ್ಸರ್‌ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಉದ್ದೇಶದಿಂದ ಗುಟ್ಖಾ ಮತ್ತು ಜಗಿಯುವ ತಂಬಾಕಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿರುವ ಉದಾಹರಣೆಗಳಿವೆ. ಹೀಗಾಗಿ ಸಮಸ್ಯೆಯ ಮೂಲದಲ್ಲಿ ಕಾನೂನಿನ ವ್ಯಾಖ್ಯಾನ ಮತ್ತು ಅದರ ಜಾರಿಗೆ ಸಂಬಂಧಿಸಿದ ಗೊಂದಲ ಎರಡೂ ಇವೆ.

ಹಾಗಾದರೆ ಇದಕ್ಕೆ ಪರಿಹಾರವೇನು? ತಂಬಾಕು, ಗುಟ್ಖಾ, ಅಡಿಕೆ ಮುಂತಾದವು ನಿಜವಾಗಿಯೂ ಆಹಾರ ವಿಭಾಗಕ್ಕೆ ಬರುತ್ತವೆಯೇ? ಅಥವಾ ಇವು ತಿನ್ನುವ ಆಹಾರವಲ್ಲ, ಜಗಿಯುವ ಉತ್ಪನ್ನಗಳಾಗಿರುವುದರಿಂದ COTPA ಮಾದರಿಯ ಪ್ರತ್ಯೇಕ ಕಾನೂನಿನ ಅಡಿಯಲ್ಲಿ ನಿಯಂತ್ರಿಸಬೇಕೇ? ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್‌ ಸ್ಪಷ್ಟವಾದ ನಿರ್ದೇಶನ ನೀಡಿದರೆ ಈ ಗೊಂದಲಕ್ಕೆ ಒಂದು ಅಂತ್ಯ ಸಿಗಬಹುದು.

ಮೇಲ್ನೋಟಕ್ಕೆ ನೋಡಿದರೆ ಅಡಿಕೆ ಹೊಟ್ಟೆ ತುಂಬಿಸಿಕೊಳ್ಳಲು ಅಥವಾ ಪೌಷ್ಟಿಕಾಂಶಕ್ಕಾಗಿ ಸೇವಿಸುವ ಆಹಾರವಲ್ಲ. ಅದು ಜಗಿಯುವ ವಸ್ತು. ಹೀಗಾಗಿ ಇದನ್ನು ಆಹಾರ ಎಂದು ಪರಿಗಣಿಸುವುದಕ್ಕಿಂತ ಪ್ರತ್ಯೇಕವಾಗಿ ನಿಯಂತ್ರಿಸುವ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ ಎಂಬ ವಾದವೂ ಇದೆ. ಅಡಿಕೆಯ ಬಳಕೆಯ ಮೇಲೂ ಕೆಲವು ನಿಯಮಗಳನ್ನು ರೂಪಿಸಬಹುದು. ಎಲ್ಲಿ ಮಾರಬೇಕು, ಹೇಗೆ ಮಾರಬೇಕು, ಯಾವ ಗುಣಮಟ್ಟದ ಉತ್ಪನ್ನವನ್ನು ಮಾರಾಟ ಮಾಡಬೇಕು ಎಂಬುದನ್ನು ನಿಯಂತ್ರಿಸಬಹುದು.

ಆದರೆ ಇಲ್ಲಿ ಒಂದು ಕುತೂಹಲಕರ ಪ್ರಶ್ನೆ ಎದುರಾಗುತ್ತದೆ. COTPA ತಂಬಾಕನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ, ಅದು ನಿಯಂತ್ರಿಸುತ್ತದೆ. ಹಾಗಾದರೆ ಅಡಿಕೆಯನ್ನೂ ಇದೇ ರೀತಿಯಲ್ಲಿ ನಿಯಂತ್ರಿಸಿದರೆ ಏನಾಗಬಹುದು?

ಇದನ್ನು ಅರ್ಥಮಾಡಿಕೊಳ್ಳಲು ತಂಬಾಕು ಮಂಡಳಿಯ ಉದಾಹರಣೆ ನೋಡಬಹುದು. ಭಾರತದಲ್ಲಿ ತಂಬಾಕು ಬೆಳೆ ಮತ್ತು ಉದ್ಯಮಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ತಂಬಾಕು ಮಂಡಳಿ ನಿಯಂತ್ರಿಸುತ್ತದೆ. ಉತ್ಪಾದನೆ, ಗುಣಮಟ್ಟ, ರೈತರ ಹಿತಾಸಕ್ತಿ, ರಫ್ತು ಹಾಗೂ ಆಮದು ಸೇರಿದಂತೆ ಹಲವು ವಿಚಾರಗಳಲ್ಲಿ ಮಂಡಳಿಯ ಪಾತ್ರವಿದೆ.

ಹಾಗಾದರೆ ನಾಳೆ ಅಡಿಕೆಗೂ ಇದೇ ರೀತಿಯ ‘ಅಡಿಕೆ ಮಂಡಳಿ’ ಬಂದರೆ? ಅಡಿಕೆಯ ಉತ್ಪಾದನೆ, ಗುಣಮಟ್ಟ, ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟಕ್ಕೆ ಕೆಲವು ನಿಯಮಗಳನ್ನು ರೂಪಿಸಲು ಸಾಧ್ಯವಾಗಬಹುದು. ಬೇಕಾಬಿಟ್ಟಿ ಅಡಿಕೆ ವಿಸ್ತರಣೆಗೆ ಕಡಿವಾಣ ಹಾಕಬಹುದು. ಈಗಾಗಲೇ ಅಡಿಕೆ ಬೆಳೆ ಹೊಂದಿರುವ ರೈತರಿಗೆ ಯಾವುದೇ ರೀತಿಯ ಏಕಾಏಕಿ ಹೊಡೆತ ಬೀಳದಂತೆ ನಿಯಂತ್ರಿತ ವ್ಯವಸ್ಥೆ ರೂಪಿಸಬಹುದು.

ಒಂದು ಸರಳ ಉದಾಹರಣೆ ತೆಗೆದುಕೊಳ್ಳೋಣ. ಮಾರುಕಟ್ಟೆಯಲ್ಲಿ ಈಗ ಶೇ. 30 ಅಡಿಕೆ ಕಳಪೆ ಗುಣಮಟ್ಟದ್ದಿದೆ ಎಂದುಕೊಳ್ಳಿ. ನಾಳೆ ಅಡಿಕೆ ಮಂಡಳಿ ಕಳಪೆ ಗುಣಮಟ್ಟದ ಆ ಅಡಿಕೆಯನ್ನು ಮಾರುಕಟ್ಟೆಯಿಂದ ಹೊರಗಿಟ್ಟರೆ ಏನಾಗುತ್ತದೆ? ಮಾರುಕಟ್ಟೆಯಲ್ಲಿ ಶೇ.30ರಷ್ಟು ಕೊರತೆ ಉಂಟಾಗುತ್ತದೆ. ಆ ಕೊರತೆಯನ್ನು ತುಂಬಲು ಉತ್ತಮ ಗುಣಮಟ್ಟದ ಅಡಿಕೆಯ ಬೇಡಿಕೆ ಹೆಚ್ಚುತ್ತದೆ. ಅದರ ಬೆಲೆಯೂ ಹೆಚ್ಚಾಗಬಹುದು. ಇದೇ ಕೆಲಸವನ್ನು ಈಗಲೂ ಮಾಡಬಹುದು. ಆದರೆ ಸಾವಿರಾರು ಕಡೆಗಳಲ್ಲಿ ಅಡಿಕೆ ವ್ಯಾಪಾರ ನಡೆಯುತ್ತಿರುವಾಗ, ಒಂದು ಕಡೆ ಕಳಪೆ ಅಡಿಕೆ ಖರೀದಿಸದಿದ್ದರೆ ರೈತ ಮತ್ತೊಂದು ಕಡೆಗೆ ಹೋಗಿ ಮಾರಾಟ ಮಾಡುತ್ತಾನೆ. ಹೀಗಾಗಿ ಮಾರುಕಟ್ಟೆಯನ್ನು ಗುಣಮಟ್ಟದ ಆಧಾರದಲ್ಲಿ ನಿಯಂತ್ರಿಸುವ ವ್ಯವಸ್ಥೆ ಇಲ್ಲದಿರುವುದು ಒಂದು ಸಮಸ್ಯೆಯಾಗಿದೆ.

ಇಲ್ಲಿ ಅಡಿಕೆ ರೈತರು ಯೋಚಿಸಬೇಕಾದ ಮತ್ತೊಂದು ವಿಚಾರವಿದೆ. ತಂಬಾಕು ಅಥವಾ ಗುಟ್ಖಾ ಕಂಪೆನಿಗಳು ಇಂತಹ ನಿರ್ಬಂಧಗಳ ವಿರುದ್ಧ ನ್ಯಾಯಾಲಯದ ಮೊರೆ ಹೋದರೆ, ಅಡಿಕೆ ಉತ್ಪನ್ನಗಳನ್ನು ‘ಆಹಾರವಲ್ಲ’ ಎಂದು ಸಾಬೀತುಪಡಿಸುವ ಪ್ರಯತ್ನವೂ ನಡೆಯಬಹುದು. ಅದು ಕಂಪೆನಿಗಳ ವ್ಯಾಪಾರಕ್ಕೆ ಅನುಕೂಲವಾಗಬಹುದು. ಆದರೆ ರೈತರ ಪಾಲಿಗೆ ಅದರಲ್ಲಿ ಲಾಭವೇನು ಎಂಬ ಪ್ರಶ್ನೆಯನ್ನು ರೈತರೇ ಕೇಳಿಕೊಳ್ಳಬೇಕು.

ಅಡಿಕೆಯನ್ನು ಇಂಗ್ಲಿಷ್‌ನಲ್ಲಿ Betel nut ಅಥವಾ Areca nut ಎಂದು ಕರೆಯಲಾಗುತ್ತದೆ. ಸಸ್ಯಶಾಸ್ತ್ರೀಯವಾಗಿ ಅದು ಬೀಜವಲ್ಲ, ಹಣ್ಣಿನ ಭಾಗವಾಗಿದೆ. ಸಂಸ್ಕೃತದಲ್ಲೂ ಅಡಿಕೆಯನ್ನು ‘ಪೂಗಫಲ’ ಎಂದು ಗುರುತಿಸಲಾಗಿದೆ. ಅಡಿಕೆ ಜಗಿದಾಗ ದೇಹದ ಮೇಲೆ ಪ್ರಚೋದಕ ಪರಿಣಾಮ ಉಂಟಾಗುತ್ತದೆ ಎಂಬುದೂ ವೈಜ್ಞಾನಿಕವಾಗಿ ತಿಳಿದಿರುವ ವಿಚಾರ. ಅಡಿಕೆಯಲ್ಲಿರುವ ಅರೆಕೋಲಿನ್ ನರಮಂಡಲದ ಮೇಲೆ ಪರಿಣಾಮ ಬೀರುವ ಪ್ರಮುಖ ಆಲ್ಕಲಾಯ್ಡ್‌ಗಳಲ್ಲಿ ಒಂದಾಗಿದೆ. ತಂಬಾಕಿನ ಪರಿಣಾಮ ಅದಕ್ಕಿಂತ ಹೆಚ್ಚು ತೀವ್ರವಾಗಿರಬಹುದು. ಆದರೆ ಅಡಿಕೆಯ ಬಗ್ಗೆ ಈ ವಿಚಾರ ಮಾತನಾಡಿದರೆ ಸಹಜವಾಗಿಯೇ ಸಾಂಪ್ರದಾಯಿಕ ಅಡಿಕೆ ರೈತರಿಗೆ ಅಸಮಾಧಾನವಾಗಬಹುದು!

ಆದರೆ ಸಮಸ್ಯೆಯನ್ನು ಎದುರಿಸಬೇಕಾದರೆ ಮೊದಲು ವಾಸ್ತವವನ್ನು ಒಪ್ಪಿಕೊಳ್ಳಬೇಕು. ಅಡಿಕೆಯನ್ನು ಕೇವಲ ‘ಪೂಜನೀಯ ತಾಂಬೂಲ’ ಎಂಬ ಭಾವನೆಯಿಂದ ಮಾತ್ರ ನೋಡದೆ, ಅದರ ಆರೋಗ್ಯದ ಪರಿಣಾಮಗಳ ಬಗ್ಗೆಯೂ ಮುಕ್ತವಾಗಿ ಚರ್ಚಿಸಬೇಕಿದೆ. ಅಡಿಕೆ ಒಂದು ಸಾಂಪ್ರದಾಯಿಕ ಬೆಳೆ ಎನ್ನುವುದು ಬೇರೆ, ಅದರ ಬಳಕೆಯ ಆರೋಗ್ಯ ಪರಿಣಾಮಗಳ ಬಗ್ಗೆ ಪ್ರಶ್ನೆ ಕೇಳುವುದು ಬೇರೆ.

ಈ ವಿಚಾರವನ್ನು ಒಪ್ಪಿಕೊಂಡಾಗ ಮಾತ್ರ ಅಡಿಕೆಯನ್ನೂ COTPA ಮಾದರಿಯ ಪ್ರತ್ಯೇಕ ಕಾನೂನಿನ ಅಡಿಯಲ್ಲಿ ನಿಯಂತ್ರಿಸುವುದೇ ಅಥವಾ ಹೊಸ ‘ಅಡಿಕೆ ಅಧಿನಿಯಮ’ ತರುವುದೇ ಎಂಬ ಬಗ್ಗೆ ಚರ್ಚೆ ಆರಂಭವಾಗಬಹುದು. ಅಂತಹ ವ್ಯವಸ್ಥೆ ಬಂದರೆ ಉತ್ಪಾದನೆ, ಸಂಸ್ಕರಣೆ, ಸಂಗ್ರಹಣೆ ಮತ್ತು ಮಾರಾಟಕ್ಕೆ ನಿಯಮಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಮುಂದೆ ಅಡಿಕೆ ಉತ್ಪಾದನೆ ಅತಿಯಾಗಿ ಮಾರುಕಟ್ಟೆ ಕುಸಿಯುವ ಪರಿಸ್ಥಿತಿ ಬಂದಾಗ ಅದನ್ನು ನಿಯಂತ್ರಿಸಲು ಕೂಡ ಒಂದು ವ್ಯವಸ್ಥೆ ಸಿದ್ಧವಾಗಿರಬಹುದು. ಈಗಾಗಲೇ ಅಡಿಕೆ ಬೆಳೆ ಹೊಂದಿರುವ ರೈತರಿಗೆ ಏಕಾಏಕಿ ಹೊಡೆತ ಬೀಳದಂತೆ ರಕ್ಷಿಸುವ ಅವಕಾಶವೂ ಇರಬಹುದು.

ಇದೆಲ್ಲದರ ನಡುವೆ ಆಚಾರ್ಯ ಚಾಣಕ್ಯನ ನಿಲುವನ್ನೂ ನೆನಪಿಸಿಕೊಳ್ಳಬಹುದು. ಅರ್ಥಶಾಸ್ತ್ರದಲ್ಲಿ, ನಶೆ ಉಂಟುಮಾಡುವ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕಿಂತ ಅವುಗಳ ಮೇಲೆ ತೆರಿಗೆ ವಿಧಿಸಿ, ಸರ್ಕಾರದ ನಿಯಂತ್ರಣದಲ್ಲಿಟ್ಟುಕೊಳ್ಳುವ ವಿಧಾನವೇ ಹೆಚ್ಚು ಪರಿಣಾಮಕಾರಿ ಎಂಬ ಚಿಂತನೆ ಕಾಣುತ್ತದೆ. ಸಂಪೂರ್ಣ ನಿಷೇಧ ಹೇರಿದರೆ ಕಳ್ಳಸಾಗಣೆ ಮತ್ತು ಅಕ್ರಮ ವ್ಯಾಪಾರ ಹೆಚ್ಚುವ ಸಾಧ್ಯತೆ ಇದೆ. ನಿಯಂತ್ರಣ ಮತ್ತು ತೆರಿಗೆ ಮೂಲಕ ಅದನ್ನು ವ್ಯವಸ್ಥೆಯೊಳಗೆ ಇಡುವುದು ಆಡಳಿತದ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿ ಎನ್ನುವುದು ಆ ಚಿಂತನೆಯ ಹಿಂದಿನ ತರ್ಕ.

ಅಡಿಕೆ ರೈತರ ಭವಿಷ್ಯವನ್ನು ಕಾಪಾಡಬೇಕಾದರೆ, ಇಂದಿನ ಮಾರುಕಟ್ಟೆ ಬೆಲೆ ನೋಡಿ ಖುಷಿಪಡುವುದಕ್ಕಿಂತ ನಾಳೆಯ ಮಾರುಕಟ್ಟೆ ಹೇಗಿರಬೇಕು ಎಂಬುದರ ಬಗ್ಗೆಯೂ ಈಗಲೇ ಯೋಚಿಸುವ ಸಮಯ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share