ಯಲ್ಲಾಪುರ: ಕಸ್ತೂರಿ ರಂಗನ್ ವರದಿಯ 7ನೇ ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿ ಸೆ.5ರಂದು ಶಿರಸಿಯಲ್ಲಿ ನಡೆಯಲಿರುವ ಹೋರಾಟಕ್ಕೆ ಯಲ್ಲಾಪುರದಿಂದ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಯಲ್ಲಾಪುರ ತಾಲೂಕಿನ ವೆಂಕಟರಮಣ ಸಭಾಂಗಣದಲ್ಲಿ ನಡೆದ ಕಸ್ತೂರಿ ರಂಗನ್ ವಿರೋಧಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಿರಸಿಯಲ್ಲಿ ನಡೆಯುವ ರ್ಯಾಲಿಯಲ್ಲಿ ಭಾಗವಹಿಸಿ, ಆಕ್ಷೇಪ ಪತ್ರ ಸಲ್ಲಿಸುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಯಲ್ಲಾಪುರ ತಾಲೂಕಿನ ಕಣ್ಣೀಗೇರಿ, ಹಿತ್ತಳ್ಳಿ, ಕುಂದರಗಿ, ನಂದೋಳ್ಳಿ, ಉಮ್ಮಚಗಿ, ಮಾವಿನಮನೆ, ಹಾಸಣಗಿ, ಆನಗೋಡ, ಮದ್ದೂರು, ಚಂದಗುಳಿ, ದೇಹಳ್ಳಿ, ಕಂಪ್ಲಿ, ವಜ್ರಳ್ಳಿ, ಇಡಗುಂದಿ, ಕಿರವತ್ತಿ, ಯಲ್ಲಾಪುರ ಹಾಗೂ ಉಪಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 84 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.
ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯಂತೆ ಪರಿಸರ ಸೂಕ್ಷ್ಮ ಪ್ರದೇಶ ನಿಗದಿಪಡಿಸುವ ಕ್ರಮವು ಸ್ಥಳೀಯ ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ವರದಿಯನ್ನು ಅನುಷ್ಠಾನಗೊಳಿಸುವ ಮೊದಲು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಗ್ರಾಮಗಳ ಮಟ್ಟದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ, ಅದರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅವರು ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದರು.
ಪಶ್ಚಿಮ ಘಟ್ಟಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಈಗಾಗಲೇ ಹಲವು ಕಾನೂನು, ನೀತಿ ಹಾಗೂ ನಿಯಮಗಳು ಜಾರಿಯಲ್ಲಿವೆ. ಹೀಗಿರುವಾಗ ಮತ್ತಷ್ಟು ಕಾನೂನುಗಳ ಮೂಲಕ ಜನಜೀವನವನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ಅದು ಗ್ರಾಮೀಣ ಜನರ ನೈಜ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ರವೀಂದ್ರ ನಾಯ್ಕ ಹೇಳಿದರು.
ಇದೇ ವೇಳೆ, ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯನ್ನು ಮನೆ ಮನೆಗೆ ತಲುಪಿಸಲು ಹೋರಾಟಗಾರರ ವೇದಿಕೆ ಮುಂದಾಗಿದೆ. ಪ್ರತಿಯೊಂದು ಕುಟುಂಬವೂ ತಮ್ಮ ಆಕ್ಷೇಪ ಪತ್ರವನ್ನು ಕೇಂದ್ರ ಪರಿಸರ ಇಲಾಖೆಗೆ ಸಲ್ಲಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ವೇದಿಕೆಯ ಜಿಲ್ಲಾ ಸಂಚಾಲಕ ಚಂದ್ರಶೇಖರ ಪೂಜಾರಿ ವಟಗೇರಿ ತಿಳಿಸಿದ್ದಾರೆ.
ಸಭೆಯಲ್ಲಿ ತಾಲೂಕಾಧ್ಯಕ್ಷ ಭೀಮಸೀ ವಾಲ್ಮೀಕಿ, ಸಂಚಾಲಕರಾದ ಚಂದ್ರಶೇಖರ ಪೂಜಾರಿ, ರಾಘವೇಂದ್ರ ಕುಣಬಿ, ಅಣ್ಣಪ್ಪ ನಾಯ್ಕ ಕಣ್ಣೀಗೇರಿ, ಪ್ರಶಾಂತ್ ಜೈನ ಆಟಬೈಲ್, ಸೀತಾರಾಮ ನಾಯ್ಕ ಕುಂದರಗಿ, ಸುಬ್ರಾಯ ಹೆಗಡೆ ಆನಗೋಡ, ವಿನೋಧ ತಳಕೇರಿ ಹಾಸಣಗಿ, ಯೋಗೇಶ ನಾಯ್ಕ, ಅರವೀಸ್ ಫರ್ನಾಂಡಿಸ್, ಬಸ್ಯಾಂವ್ ಡಿಸೋಜಾ, ಶಿವರಾಮ ಆಚಾರಿ, ಸಹದೇವ ಗಾವಡಿ, ರಾಘವೇಂದ್ರ ಮರಾಠಿ, ಕೃಷ್ಣ ಕುಣಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.