ಶಿರಸಿ: ಚಲಿಸುತ್ತಿದ್ದ ಬಸ್‌ನ ಟಯರ್ ನೆಟ್‌ನ ಬೋಲ್ಟ್‌ಗಳು ಕಳಚಿಬಿದ್ದು, ಟಯರ್ ಸಂಪೂರ್ಣವಾಗಿ ಕಳಚಿಕೊಳ್ಳುವ ಹಂತಕ್ಕೆ ತಲುಪಿದ ಘಟನೆ ಶಿರಸಿಯ ಶಿವಾಜಿ ಚೌಕ್ ಬಳಿ ಸೋಮವಾರ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಚಂದ್ರಗುತ್ತಿಯಿಂದ ಶಿರಸಿಗೆ ಬರುತ್ತಿದ್ದ ಬಸ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಬಸ್‌ನಲ್ಲಿ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಸ್ ಚಲಿಸುತ್ತಿರುವಾಗಲೇ ಟಯರ್ ನೆಟ್‌ನ ಬೋಲ್ಟ್‌ಗಳು ಕಳಚಿಕೊಂಡಿದ್ದು, ಕೊನೆಗೆ ಕೇವಲ ಒಂದೇ ಒಂದು ಬೋಲ್ಟ್‌ನ ಆಧಾರದಲ್ಲಿ ಟಯರ್ ನಿಂತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಬಸ್ ನಿಲ್ಲಿಸಲಾಯಿತು. ಟಯರ್ ಸಂಪೂರ್ಣವಾಗಿ ಕಳಚಿಕೊಂಡಿದ್ದರೆ, ಅದರಲ್ಲೂ ವಿದ್ಯಾರ್ಥಿಗಳಿಂದ ತುಂಬಿದ್ದ ಬಸ್ ನಿಯಂತ್ರಣ ಕಳೆದುಕೊಂಡಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಈ ಘಟನೆ ಬಸ್ ನಿರ್ವಹಣೆಯ ಗುಣಮಟ್ಟದ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಟಯರ್ ಬೋಲ್ಟ್‌ಗಳನ್ನು ಸಮರ್ಪಕವಾಗಿ ಪರಿಶೀಲಿಸದಿರುವುದು ಚಾಲಕನ ನಿರ್ಲಕ್ಷ್ಯವೇ ಅಥವಾ ಬಸ್ ಡಿಪೋದಲ್ಲಿನ ಮೆಕ್ಯಾನಿಕಲ್ ನಿರ್ವಹಣೆಯ ಲೋಪವೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರ ಸುರಕ್ಷತೆಯೇ ಪ್ರಮುಖವಾಗಿರುವ ಸಂದರ್ಭದಲ್ಲಿ, ಬಸ್‌ಗಳ ಸಂಚಾರಕ್ಕೂ ಮುನ್ನ ಟಯರ್, ಬೋಲ್ಟ್ ಸೇರಿದಂತೆ ಪ್ರಮುಖ ಭಾಗಗಳ ಸುರಕ್ಷತಾ ಪರಿಶೀಲನೆಯನ್ನು ಕಟ್ಟುನಿಟ್ಟಾಗಿ ನಡೆಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.