ಕುಮಟಾ: ಭಾರಿ ಗಾಳಿ–ಮಳೆಯ ನಡುವೆ ಜಡ್ಡಿಕೆರೆಯ ಒಡ್ಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು 21 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕುಮಟಾ ತಾಲೂಕಿನ ಹೆಗಡೆ ಗುನಗನಕೊಪ್ಪ ಸಮೀಪ ನಡೆದಿದೆ.
ಮೃತರನ್ನು ಹೆಗಡೆ ಗುನಗನಕೊಪ್ಪ ನಿವಾಸಿ ಪ್ರಶಾಂತ ಕೇಶವ ಮುಕ್ರಿ (21) ಎಂದು ಗುರುತಿಸಲಾಗಿದೆ.
ಆ.23ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಪ್ರಶಾಂತ, ಸಂಬಂಧಿಕರ ಮನೆಗೆ ವಾಲಗಳ್ಳಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಸ್ನೇಹಿತರೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಜಡ್ಡಿಕೆರೆಗೆ ತೆರಳಿದ್ದ. ಜಡ್ಡಿಕೆರೆ ಬಳಿ ಬೈಕ್ ನಿಲ್ಲಿಸಿ ಸ್ನೇಹಿತರೊಂದಿಗೆ ಕೆರೆಯ ಒಡ್ಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ, ಬೆಳಿಗ್ಗೆ ಸುಮಾರು 10.15ರ ವೇಳೆಗೆ ಏಕಾಏಕಿ ಭಾರಿ ಗಾಳಿ–ಮಳೆ ಆರಂಭವಾಗಿದೆ.
ಈ ವೇಳೆ ಪ್ರಶಾಂತ ಆಕಸ್ಮಿಕವಾಗಿ ಕಾಲು ಜಾರಿ ಜಡ್ಡಿಕೆರೆಯ ನೀರಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.