ಕಾರವಾರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆಯಲ್ಲಿ ಮ್ಯಾಪಿಂಗ್ ಆಗದಿರುವ ಮತದಾರರು, ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವವರು ಹಾಗೂ ಅಗತ್ಯವಿರುವ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಟಿಸ್ ಸ್ವೀಕರಿಸುವ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಒಟ್ಟು 12,30,037 ಮತದಾರರ ಪೈಕಿ 11,23,022 ಮಂದಿಯ ಮ್ಯಾಪಿಂಗ್ ಪೂರ್ಣಗೊಂಡಿದೆ. ಸ್ಥಳಾಂತರ, ವಲಸೆ, ಮರಣ, ದ್ವಿಪ್ರತಿ ಸೇರಿದಂತೆ ವಿವಿಧ ಕಾರಣಗಳಿಗೆ ಸಂಬಂಧಿಸಿದಂತೆ 1,07,015 ಪ್ರಕರಣಗಳನ್ನು ಗುರುತಿಸಲಾಗಿದ್ದು, ಈ ಪೈಕಿ 65,330 ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಾಗಿದೆ ಎಂದು ಅವರು ತಿಳಿಸಿದರು.
ಸಂಬಂಧಪಟ್ಟ ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಪಡೆದವರು ಅದರಲ್ಲಿ ನಮೂದಿಸಿರುವ ದಿನಾಂಕ, ಸ್ಥಳ ಹಾಗೂ ಸಮಯಕ್ಕೆ ಖುದ್ದಾಗಿ ಹಾಜರಾಗಿ, ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ವಿಚಾರಣೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಮತ್ತೊಂದು ದಿನಾಂಕ ನೀಡಲಾಗುತ್ತದೆ. ಗರಿಷ್ಠ ಎರಡು ವಿಚಾರಣಾ ದಿನಾಂಕಗಳನ್ನು ಮಾತ್ರ ನೀಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಸೆ.23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಅ.1, 2026ಕ್ಕೆ 18 ವರ್ಷ ಪೂರ್ಣಗೊಳಿಸುವ ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಬಹುದು. ಇದಕ್ಕಾಗಿ ನಮೂನೆ-6ರೊಂದಿಗೆ ನಿಗದಿತ ದಾಖಲೆಗಳು ಹಾಗೂ ಡಿಕ್ಲರೇಷನ್ ಫಾರಂ ಸಲ್ಲಿಸುವುದು ಕಡ್ಡಾಯವಾಗಿದೆ. ಹೆಸರು ತೆಗೆದುಹಾಕಲು ನಮೂನೆ-7 ಹಾಗೂ ಹೆಸರು, ವಿಳಾಸ ಸೇರಿದಂತೆ ವಿವಿಧ ವಿವರಗಳ ತಿದ್ದುಪಡಿಗೂ ಅವಕಾಶವಿದೆ. ಮತಗಟ್ಟೆ ಅಥವಾ ವಿಧಾನಸಭಾ ಕ್ಷೇತ್ರ ಬದಲಾವಣೆಗೆ ಸಂಬಂಧಿಸಿದ ಅರ್ಜಿಗಳನ್ನೂ ಸಲ್ಲಿಸಬಹುದಾಗಿದೆ.
ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆರು ವಿಧಾನಸಭಾ ಕ್ಷೇತ್ರಗಳಲ್ಲಿ 5,62,004 ಪುರುಷರು, 5,61,014 ಮಹಿಳೆಯರು ಹಾಗೂ ನಾಲ್ವರು ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 11,23,022 ಮತದಾರರಿದ್ದಾರೆ. ಮತಗಟ್ಟೆಗಳ ಪುನರ್‌ವಿಂಗಡಣೆ ಬಳಿಕ 78 ಹೊಸ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆಗಳ ಸಂಖ್ಯೆ 1,523ಕ್ಕೆ ಏರಿಕೆಯಾಗಿದೆ.
ಅ.22ರೊಳಗೆ ಎಲ್ಲಾ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ, ಅ.27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಅರವಿಂದ್ ಕಲ್ಗುಟಕರ್, ರಮೇಶ್ ಮುದಗೇಕರ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸೂರಜ್ ನಾಯ್ಕ್ ಸೋನಿ, ವಕ್ತಾರ ಉದಯ ಭೋವಿ, ಕೃಷ್ಣ ಲಿಂಗಣಕರ್, ಜ್ಞಾನೇಶ್ವರ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳೂಂಕೆ ಉಪಸ್ಥಿತರಿದ್ದರು.