Monday, September 7, 2026
Join WhatsApp Group
HomeLocal Newsನದಿ ತಿರುವು ವಿರೋಧಿಸಿ ಸೆ.3ಕ್ಕೆ ಗೋಕರ್ಣ–ಕಾರವಾರ ಚಲೋ

ನದಿ ತಿರುವು ವಿರೋಧಿಸಿ ಸೆ.3ಕ್ಕೆ ಗೋಕರ್ಣ–ಕಾರವಾರ ಚಲೋ

ಶಿರಸಿ: ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ವಿರುದ್ಧದ ಹೋರಾಟವನ್ನು ಹಂತಹಂತವಾಗಿ ಮತ್ತಷ್ಟು ತೀವ್ರಗೊಳಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ. ಸ್ವರ್ಣವಲ್ಲೀ ಮಠದಲ್ಲಿ ನಡೆದ ವಿಶೇಷ ಸಭೆಯಲ್ಲಿ ಮುಂದಿನ ಹೋರಾಟಗಳ ಕುರಿತು ಚರ್ಚಿಸಿ ಹಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಹೋರಾಟ ತೀವ್ರಗೊಳಿಸುವ ಅಗತ್ಯದ ಬಗ್ಗೆ ಚರ್ಚೆಯ ನಡೆದ ಬಳಿಕ ಮಾತನಾಡಿದ ಸ್ವರ್ಣವಲ್ಲೀ ಶ್ರೀಗಳು, ನದಿ ತಿರುವು ಯೋಜನೆ ವಿರುದ್ಧದ ಚಳುವಳಿಯನ್ನು ಸಮರೋಪಾದಿಯಲ್ಲಿ ಮುನ್ನಡೆಸಬೇಕಿದೆ. ಇದಕ್ಕೆ ಕರಾವಳಿ ಭಾಗದ ಜನರು ಸಂಪೂರ್ಣವಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಬೆಂಗಳೂರಿನಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA)ಯ ವಿಜ್ಞಾನಿಗಳೊಂದಿಗೆ ನಡೆದ ಚರ್ಚೆಯಲ್ಲಿ ತಮ್ಮ ನಿಯೋಗದಲ್ಲಿದ್ದ ತಜ್ಞರು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆದರೆ ಅವುಗಳಿಗೆ ಸಂಸ್ಥೆಯ ವಿಜ್ಞಾನಿಗಳು ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಕರಾವಳಿ ಭಾಗದಲ್ಲಿ ನಡೆಸಲಾದ ಜನಜಾಗೃತಿ ಅಭಿಯಾನದ ಕುರಿತು ವಿಶ್ವನಾಥ ಶೀಗೆಹಳ್ಳಿ ಹಾಗೂ ಪ್ರಮೋದ್ ವೈದ್ಯ ಮತ್ತಿಘಟ್ಟ ಮಾಹಿತಿ ನೀಡಿದರು. ಕರಾವಳಿ ಭಾಗದಲ್ಲಿ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮುಂದಿನ ಹೋರಾಟಕ್ಕೂ ವ್ಯಾಪಕ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಶ್ರೀಮನ್ ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು, ಹಿರಿಯ ಸಹಕಾರಿ ಎನ್.ವಿ. ಹೆಗಡೆ ಮುತ್ತಿಗೆ, ಜಿ.ಆರ್. ಹೆಗಡೆ ಬೆಳ್ಳೆಕೆರಿ, ಶಿವಾನಂದ ಕಳವೆ, ಎಂ.ಕೆ. ಭಟ್ ಯಡ್ಹಳ್ಳಿ, ರಾಘವೇಂದ್ರ ಭಟ್ಟ ಹಾಸಣಗಿ, ನರಸಿಂಹ ಸಾತೊಡ್ಡಿ ಹಾಗೂ ಜಿ.ಎನ್. ಹೆಗಡೆ ಕಣ್ಣಿಮನೆ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸುರೇಶ ಹಕ್ಕಿಮನೆ ಸ್ವಾಗತಿಸಿದರು. ಅನಂತ ಭಟ್ ಹುಳಗೋಳ ವಂದಿಸಿದರು.

ಸಭೆಯಲ್ಲಿ ಹೋರಾಟದ ಮುಂದಿನ ಹಂತಗಳಿಗೂ ರೂಪುರೇಷೆ ಸಿದ್ಧಪಡಿಸಲಾಯಿತು. ಸೆಪ್ಟೆಂಬರ್ 3ರಂದು ಗೋಕರ್ಣ–ಕಾರವಾರ ಚಲೋ, ಅಕ್ಟೋಬರ್ 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಾಗೂ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ರಾಸ್ತಾ ರೋಕೋ ನಡೆಸಲು ತೀರ್ಮಾನಿಸಲಾಯಿತು.

ಇದರ ಜತೆಗೆ ಯೋಜನೆ ವಿರುದ್ಧ ಕಾನೂನು ಹೋರಾಟವನ್ನೂ ನಡೆಸಲು ಸಭೆ ನಿರ್ಧರಿಸಿದೆ. ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ಸಂಬಂಧಿಸಿದಂತೆ DPR ಸಿದ್ಧಪಡಿಸದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಿನ ನಿಲುವು ತಾಳಬೇಕು ಎಂಬ ಒಕ್ಕೊರಲ ಆಗ್ರಹವೂ ಸಭೆಯಲ್ಲಿ ವ್ಯಕ್ತವಾಯಿತು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share