Monday, September 7, 2026
Join WhatsApp Group
HomeNationalನೇಪಾಳದಲ್ಲಿ ಜಲಪ್ರಳಯ: 105 ಭಾರತೀಯರು ನಾಪತ್ತೆ

ನೇಪಾಳದಲ್ಲಿ ಜಲಪ್ರಳಯ: 105 ಭಾರತೀಯರು ನಾಪತ್ತೆ

ನೇಪಾಳ: ಟಿಬೆಟ್ ಗಡಿಯಿಂದ ಹರಿದುಬರುವ ಭೋಟೆಕೋಶಿ ನದಿಯಲ್ಲಿ ಹಠಾತ್ ಪ್ರವಾಹ ಉಂಟಾದ ಪರಿಣಾಮ ನೇಪಾಳದ ರಸುವಾ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ಪ್ರವಾಹದಲ್ಲಿ ಇದುವರೆಗೆ 16 ಮಂದಿ ಮೃತಪಟ್ಟಿದ್ದು, 105 ಭಾರತೀಯರು ಸೇರಿದಂತೆ 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಆ.26ರಂದು ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ರಸುವಾ ಜಿಲ್ಲೆಯ ಭೋಟೆಕೋಶಿ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಕ್ಷಣಾರ್ಧದಲ್ಲಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ಹರಿಯುವ ಪ್ರದೇಶದ ಸುತ್ತಮುತ್ತ ಭಾರೀ ಹಾನಿ ಸಂಭವಿಸಿದೆ. ಹಲವು ರಸ್ತೆಗಳು ಹಾಗೂ ಜಲವಿದ್ಯುತ್ ಯೋಜನೆಗಳು ಪ್ರವಾಹದ ಹೊಡೆತಕ್ಕೆ ಸಿಲುಕಿವೆ.

ನೇಪಾಳ ಪ್ರವಾಸೋದ್ಯಮ ಮಂಡಳಿ ಬಿಡುಗಡೆ ಮಾಡಿರುವ ಪ್ರಾಥಮಿಕ ಪಟ್ಟಿಯ ಪ್ರಕಾರ, ನಾಪತ್ತೆಯಾದ 384 ಪ್ರವಾಸಿಗರಲ್ಲಿ 291 ಮಂದಿ ವಿದೇಶಿ ಪ್ರಜೆಗಳು ಹಾಗೂ 93 ಮಂದಿ ನೇಪಾಳಿ ಪ್ರಜೆಗಳು ಇದ್ದಾರೆ. ವಿದೇಶಿ ಪ್ರಜೆಗಳ ಪೈಕಿ ಭಾರತೀಯರ ಸಂಖ್ಯೆಯೇ ಹೆಚ್ಚಿದ್ದು, ಒಟ್ಟು 105 ಭಾರತೀಯರು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಇವರಲ್ಲಿ 37 ಮಂದಿಯನ್ನು ಅನಿವಾಸಿ ಭಾರತೀಯರು ಎಂದು ಗುರುತಿಸಲಾಗಿದೆ.

ಆದರೆ ಈ ಸಂಖ್ಯೆಗಳು ಇನ್ನೂ ಅಂತಿಮವಾಗಿಲ್ಲ. ನಾಪತ್ತೆಯಾದವರ ಪಟ್ಟಿಯಲ್ಲಿರುವವರ ಸ್ಥಳ ಹಾಗೂ ಸುರಕ್ಷತಾ ಸ್ಥಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪರಿಶೀಲನೆ ಪೂರ್ಣಗೊಳ್ಳುವವರೆಗೆ ಪ್ರಯಾಣಿಕರು ಹಾಗೂ ಅವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಬಾರದು ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ಮನವಿ ಮಾಡಿದೆ.

ಪ್ರವಾಹದ ಬಳಿಕ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ. ನೇಪಾಳ ಪ್ರವಾಸೋದ್ಯಮ ಮಂಡಳಿ, ಪೊಲೀಸರು, ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಸಂಸ್ಥೆಗಳು, ಮಾರ್ಗದರ್ಶಕರು ಹಾಗೂ ಭದ್ರತಾ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನೇಪಾಳದಲ್ಲಿ ಭೋಟೆಕೋಶಿ ಹಾಗೂ ತ್ರಿಶೂಲಿ ನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಭಾರತದ ಗಡಿ ಭಾಗಗಳಲ್ಲೂ ಆತಂಕ ಎದುರಾಗಿದೆ. ವಿಶೇಷವಾಗಿ ಬಿಹಾರದಲ್ಲಿ ಗಂದಕ್ ನದಿಯ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನೇಪಾಳದ ಪ್ರವಾಹ ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಗಮನಿಸುತ್ತಿದ್ದು, ನದಿಪಾತ್ರದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದ ಪ್ರವಾಸಿಗರ ನಿಖರ ಸಂಖ್ಯೆ ಹಾಗೂ ಅವರ ಸುರಕ್ಷತೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share