ಯಲ್ಲಾಪುರ: ಬೇಡ್ತಿ–ವರದಾ ನದಿ ತಿರುವು ಯೋಜನೆ ವಿರುದ್ಧ ಜನಾಂದೋಲನ ತೀವ್ರಗೊಳ್ಳುತ್ತಿರುವ ನಡುವೆಯೇ ಬೇಡ್ತಿ ನದಿ ತಟದ ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ಕಂಡುಬಂದಿರುವುದು ಸ್ಥಳೀಯರಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ.
ಸೋಮವಾರ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಮಂಚಿಕೇರಿ ಆಸುಪಾಸಿನಲ್ಲಿ ಹೆಲಿಕಾಪ್ಟರ್ ಅತ್ಯಂತ ಕಡಿಮೆ ಎತ್ತರದಲ್ಲಿ ಕೆಲಕಾಲ ಹಾರಾಟ ನಡೆಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಕಳೆದ ಗುರುವಾರ ಬೆಳಗ್ಗೆ ಸುಮಾರು 11.45ರ ವೇಳೆಯಲ್ಲೂ ಇದೇ ಪ್ರದೇಶದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಿತ್ತು ಎನ್ನಲಾಗಿದೆ.
ಈ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಸೆ.3ರಂದು ನಡೆಯಲಿರುವ ಗೋಕರ್ಣ–ಅಂಕೋಲಾ–ಕಾರವಾರ ಚಲೋ ಜಾಥಾಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ನದಿ ತಿರುವು ಯೋಜನೆಗಾಗಿ ನಡೆಯಬಹುದಾದ ಸಮೀಕ್ಷೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಇತ್ತೀಚೆಗೆ ನಡೆದ ಸಭೆಯಲ್ಲಿ ಹೋರಾಟಗಾರರು ಸ್ಪಷ್ಟಪಡಿಸಿದ್ದರು. ವಿಶೇಷವಾಗಿ ಡ್ರೋನ್ ಸಮೀಕ್ಷೆ ನಡೆಸುವುದನ್ನು ತಡೆಯುವುದಾಗಿ ಹಾಗೂ ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಬಾರದು ಎಂದು ಒತ್ತಾಯಿಸಿದ್ದರು.
ಇದಕ್ಕೂ ಮೊದಲು ಯೋಜನಾ ಪ್ರದೇಶದ ಸೂರೆಮನೆ ಸಮೀಪದ ಚುಂಚಿಹೊಂಡದಲ್ಲಿ ಡ್ರೋನ್ ಹಾರಾಟ ಕಂಡುಬಂದಿತ್ತು ಎಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ. ಇದೀಗ ಡ್ರೋನ್ ಬದಲಿಗೆ ಹೆಲಿಕಾಪ್ಟರ್ ಮೂಲಕ ಪ್ರದೇಶದ ಚಿತ್ರಣ ಅಥವಾ ಸಮೀಕ್ಷೆ ನಡೆಸಲಾಗುತ್ತಿದೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ. ಆದರೆ ಹೆಲಿಕಾಪ್ಟರ್ ಹಾರಾಟದ ನಿಖರ ಉದ್ದೇಶವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
ಒಂದೆಡೆ ಯೋಜನೆ ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿದ್ದರೆ, ಮತ್ತೊಂದೆಡೆ ಯೋಜನಾ ಪ್ರದೇಶದ ಮೇಲೆ ಪದೇಪದೇ ಹೆಲಿಕಾಪ್ಟರ್ ಹಾಗೂ ಡ್ರೋನ್‌ಗಳ ಹಾರಾಟ ಕಂಡುಬರುತ್ತಿರುವುದು ಜನರ ಆತಂಕವನ್ನು ಹೆಚ್ಚಿಸಿದೆ.
ಹೆಲಿಕಾಪ್ಟರ್ ಹಾರಾಟಕ್ಕೆ ಕಾರಣವೇನು? ಅದು ಯಾವುದೇ ಅಧಿಕೃತ ಸಮೀಕ್ಷೆ ಅಥವಾ ಅಧ್ಯಯನದ ಭಾಗವೇ? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬೆಳವಣಿಗೆಗಳು ಬೇಡ್ತಿ–ವರದಾ ನದಿ ತಿರುವು ಯೋಜನೆ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಕಾವು ನೀಡುವ ಸಾಧ್ಯತೆ ಇದೆ. ಸೆ.3ರ ಜಾಥಾದಲ್ಲಿ ಈ ವಿಚಾರವೂ ಪ್ರಮುಖವಾಗಿ ಪ್ರಸ್ತಾಪವಾಗುವ ನಿರೀಕ್ಷೆಯಿದೆ.