Ad
Ad
Ad
Home Local News ಮೊದಲು ಕಲಿಯಬೇಕು, ನಂತರ ಸಂಪಾದಿಸಬೇಕು!

ಮೊದಲು ಕಲಿಯಬೇಕು, ನಂತರ ಸಂಪಾದಿಸಬೇಕು!

0
9

ತಾರೇಸರ, ಕುಚಗುಂಡಿಯಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದ ಅನಂತಮೂರ್ತಿ ಹೆಗಡೆ ಅಭಿಮತ

ಸಿದ್ದಾಪುರ: ಮಹಿಳೆಯರು ಹೊಲಿಗೆ ತರಬೇತಿ ಪಡೆದುಕೊಂಡರೆ ಮನೆಯಲ್ಲಿಯೇ ಉದ್ಯೋಗ ಆರಂಭಿಸಿ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಸ್ವಾವಲಂಬನೆಯ ಮೂಲಕ ಬಡತನದಿಂದ ಹೊರಬರಲು ಇಂತಹ ಕೌಶಲ್ಯ ತರಬೇತಿಗಳು ಸಹಕಾರಿಯಾಗುತ್ತವೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅಭಿಪ್ರಾಯಪಟ್ಟರು.

ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ನೆರವಾಗುವ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾರೇಸರ ಮತ್ತು ಕುಚಗುಂಡಿಯಲ್ಲಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ಜೀವನದ ಕೊನೆಯವರೆಗೂ ಕಲಿಕೆ ನಿರಂತರ. ಮೊದಲು ಕಲಿಯಬೇಕು, ನಂತರ ಸಂಪಾದಿಸಬೇಕು. ನುರಿತ ತರಬೇತುದಾರರಿಂದ ಒಂದು ತಿಂಗಳ ಕಾಲ ತರಬೇತಿ ನೀಡಲಾಗುತ್ತಿದ್ದು, ಉತ್ತಮ ಗುಣಮಟ್ಟದ ಹೊಲಿಗೆ ಯಂತ್ರವನ್ನೂ ಒದಗಿಸಲಾಗಿದೆ. ಮಹಿಳೆಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

ಮಹಿಳೆಯರು ಸ್ವ ಉದ್ಯೋಗದ ಮೂಲಕ ಕುಟುಂಬ ನಿರ್ವಹಣೆಯಲ್ಲಿ ಮತ್ತಷ್ಟು ಶಕ್ತರಾಗಬೇಕು ಎಂಬ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಜನರ ನಡುವೆ ಆತ್ಮೀಯತೆ ಹಾಗೂ ಸಾಮಾಜಿಕ ಸಾಮರಸ್ಯ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಹಸ್ರಗೋಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರದೀಪ ಹೆಗಡೆ ಕರ್ಜಗಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವ ಉದ್ಯೋಗದ ತರಬೇತಿ ನೀಡಬೇಕು ಎಂಬ ಅನಂತಮೂರ್ತಿ ಹೆಗಡೆ ಅವರ ಬಹುದೊಡ್ಡ ಕನಸು ಇದೀಗ ನನಸಾಗುತ್ತಿದೆ. ಮಹಿಳೆಯರು ಸ್ವ ಉದ್ಯೋಗದ ಮೂಲಕ ಕುಟುಂಬ ನಿರ್ವಹಣೆ ಮಾಡುವ ಶಕ್ತಿ ಹೊಂದಬೇಕು ಎಂಬುದೇ ಕಾರ್ಯಕ್ರಮದ ಉದ್ದೇಶ ಎಂದರು.

ನಾರಾಯಣ ಹೆಗಡೆ ತಾರೇಸರ ಮಾತನಾಡಿ, ಹೊಲಿಗೆ ಕಲಿಯುವುದು ಆರ್ಥಿಕವಾಗಿ ಸದೃಢರಾಗಲು ಇರುವ ಸರಳ ಮಾರ್ಗಗಳಲ್ಲಿ ಒಂದು. ತಮ್ಮೂರಿನಲ್ಲಿ ಟ್ರಸ್ಟ್ ವತಿಯಿಂದ ಉಚಿತ ಹೊಲಿಗೆ ತರಬೇತಿ ಶಿಬಿರ ಆರಂಭಿಸಿರುವುದು ಸಂತಸದ ಸಂಗತಿ ಎಂದರು.

ಸ್ಥಳೀಯ ಪ್ರಮುಖ ಕಮಲಾಕರ ನಾಯ್ಕ ಹೆರೂರು ಮಾತನಾಡಿ, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸಿದೆ. ಜಾತಿ ಭೇದವಿಲ್ಲದೆ ಸಾಮಾಜಿಕ ಕಳಕಳಿಯಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಅನಂತಮೂರ್ತಿ ಹೆಗಡೆ ಅವರಂತಹ ವ್ಯಕ್ತಿತ್ವಗಳು ಸಮಾಜದಲ್ಲಿ ಅಪರೂಪ. ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಎಂಬ ಉದ್ದೇಶದಿಂದ ಇದೀಗ ಈ ತರಬೇತಿ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಮಹಿಳೆಯರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸುಬ್ರಾಯ ಹೆಗಡೆ ಬೇಣದಮನೆ, ಆರ್.ಜಿ. ಭಟ್ ಯಲೂಗಾರ, ನಾರಾಯಣ ಹೆಗಡೆ ತಾರೇಸರ, ಗಣೇಶ ಹೆಗಡೆ ಶಮೆಮನೆ, ನವೀನ ಹೆಗಡೆ ತಾರೇಸರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹೊಲಿಗೆ ತರಬೇತುದಾರರಾದ ವೀಣಾ ಕೊಳಗಿಬೀಸ್ ಹಾಗೂ ಆಶಾ ಶಿರಸಿ ತರಬೇತಿ ನೀಡುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!