Ad
Ad
Ad
Home Local News ಜನರ ಅಭಿಮಾನವೇ ದೊಡ್ಡ ಸಂಪತ್ತು; ಸ್ವರ್ಣವಲ್ಲೀ ಶ್ರೀ

ಜನರ ಅಭಿಮಾನವೇ ದೊಡ್ಡ ಸಂಪತ್ತು; ಸ್ವರ್ಣವಲ್ಲೀ ಶ್ರೀ

0
8

ಯಲ್ಲಾಪುರ: ದೀರ್ಘಕಾಲ ಪಶು ಚಿಕಿತ್ಸಕರಾಗಿ ಸೇವೆ ಸಲ್ಲಿಸಿ, ಬಳಿಕ ಗೋಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ನಿವೃತ್ತ ಪಶು ಚಿಕಿತ್ಸಕ ಕೆ.ಜಿ. ಹೆಗಡೆ ಹಾಗೂ ಅವರ ಪತ್ನಿ ಶ್ಯಾಮಲಾ ಹೆಗಡೆ ದಂಪತಿಯನ್ನು ಸ್ವರ್ಣವಲ್ಲಿ ಮಠದಲ್ಲಿ ಸನ್ಮಾನಿಸಲಾಯಿತು.

ಸ್ವರ್ಣವಲ್ಲಿ ಚಿನ್ನಾಪುರ ಸೀಮೆಯ ಮೇಲ್ಪರ್ಪ ಹಾಗೂ ಕೆಳತರ್ಪದ ವತಿಯಿಂದ ಸ್ವರ್ಣವಲ್ಲಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ದಂಪತಿಯನ್ನು ಗೌರವಿಸಲಾಯಿತು.

ಸನ್ಮಾನಿಸಿ ಮಾತನಾಡಿದ ಶ್ರೀಗಳು, ಕೆ.ಜಿ. ಹೆಗಡೆ ಅವರು ಸುದೀರ್ಘ ಅವಧಿಯಲ್ಲಿ ಸಲ್ಲಿಸಿರುವ ಗೋಸೇವೆ ಅನನ್ಯವಾದದ್ದು. ಜನರು ಅವರನ್ನು ಇಷ್ಟೊಂದು ಪ್ರೀತಿಯಿಂದ ಕಾಣುತ್ತಿರುವುದು ಅವರು ಜನರೊಂದಿಗೆ ಎಷ್ಟು ಆತ್ಮೀಯವಾಗಿ ಬೆರೆತು ಸೇವೆ ಸಲ್ಲಿಸಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.

ಜನರ ಅಭಿಮಾನಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಕೇವಲ ಧನಾರ್ಜನೆಗೆ ಪ್ರಾಶಸ್ತ್ಯ ನೀಡದೆ ಗೋಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವುದರಿಂದ ಇಂದಿನ ಸನ್ಮಾನಕ್ಕೆ ವಿಶೇಷ ಮಹತ್ವವಿದೆ ಎಂದು ಶ್ರೀಗಳು ಹೇಳಿದರು.

ಹಿಂದಿನ ಕಾಲದಲ್ಲಿ ಗೋವುಗಳನ್ನು ‘ಗೋಧನ’ ಎಂದು ಪರಿಗಣಿಸಿ ಅವುಗಳ ಮೂಲಕ ಕ್ರಯ-ವಿಕ್ರಯ ನಡೆಯುತ್ತಿತ್ತು. ‘ಧನ’ ಎಂದರೆ ಸಂಪತ್ತು ಎಂಬ ಅರ್ಥವೂ ಇದೆ. ಪಶುಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಮನುಷ್ಯರ ಆರೋಗ್ಯದಷ್ಟೇ ಪಶುಗಳ ಆರೋಗ್ಯಕ್ಕೂ ಮಹತ್ವ ನೀಡಬೇಕು ಎಂದರು.

ಕೆ.ಜಿ. ಹೆಗಡೆ ಅವರು ಸುದೀರ್ಘ ಕಾಲ ಗೋಸೇವೆ ಸಲ್ಲಿಸುವ ಮೂಲಕ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಮುಂದೆಯೂ ಅವರ ಸೇವೆ ನಿರಂತರವಾಗಿ ಮುಂದುವರಿಯಲಿ ಹಾಗೂ ಭಗವಂತ ಅವರ ಕುಟುಂಬಕ್ಕೆ ಒಳಿತನ್ನು ಕರುಣಿಸಲಿ ಎಂದು ಶ್ರೀಗಳು ಆಶೀರ್ವದಿಸಿದರು.

ಮಠದ ಆಡಳಿತ ಸಮಿತಿ ಸದಸ್ಯ ಆರ್.ಎಸ್. ಹೆಗಡೆ ಬೈರುಂಬೆ ಅವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟ್ರಮಣ ಬೆಳ್ಳಿ ಅಭಿನಂದನಾ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಚಿನ್ನಾಪುರ ಸೀಮೆಯ ಮೇಲ್ಪರ್ಪ ಹಾಗೂ ಕೆಳತರ್ಪದ ಅಧ್ಯಕ್ಷರಾದ ದತ್ತಾತ್ರೇಯ ಹೆಗಡೆ ಕಣ್ಣಿಪಾಲ್, ನಾರಾಯಣ ಹೆಗಡೆ ಬೀಗಾರ್, ನಾರಾಯಣ ಶಿರ್ಲೆ, ದತ್ತಾತ್ರೇಯ ಭಟ್ ಗಿಡಗಾರಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಬೆಳಿಗ್ಗೆ ಸೀಮೆಯ ಮಾತೆಯರಿಂದ ಲೋಕಕಲ್ಯಾಣಕ್ಕಾಗಿ ಕುಂಕುಮಾರ್ಚನೆ ಹಾಗೂ ಪುರುಷರಿಂದ ಗಾಯತ್ರಿ ಜಪ ಅನುಷ್ಠಾನ ನಡೆಯಿತು.

ಸನ್ಮಾನ ಸ್ವೀಕರಿಸಿದ ಕೆ.ಜಿ. ಹೆಗಡೆ ಅವರು, ಶ್ರೀಗಳ ಸಾನ್ನಿಧ್ಯದಲ್ಲಿ ದೊರೆತ ಗೌರವಕ್ಕೆ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!