ಆರ್.ಐ. ನಾಯ್ಕರ ಸೇವಾ ಪಯಣಕ್ಕೆ ಹಾರೈಕೆಗಳ ಮಹಾಪೂರ
ಯಲ್ಲಾಪುರ: ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದರ ಜೊತೆಗೆ ಅವರ ಬದುಕಿನ ಕಷ್ಟಗಳಿಗೆ ಸ್ಪಂದಿಸಿ, ಸಮಾಜದ ಬಗ್ಗೆಯೂ ಕಾಳಜಿ ವಹಿಸಿದಾಗ ಆತನ ವೃತ್ತಿ ನಿಜವಾದ ಅರ್ಥದಲ್ಲಿ ಸೇವೆಯಾಗುತ್ತದೆ. ಯಲ್ಲಾಪುರದ ರಾಮಚಂದ್ರ ಈಶ್ವರ ನಾಯ್ಕ (ಆರ್.ಐ. ನಾಯ್ಕ) ಅವರ 36 ವರ್ಷ 10 ತಿಂಗಳ ಶಿಕ್ಷಕ ಸೇವೆ ಇದಕ್ಕೊಂದು ಉತ್ತಮ ಉದಾಹರಣೆ. ಮಕ್ಕಳನ್ನು ದೇವರ ಸಮಾನವಾಗಿ ಕಾಣಬೇಕು ಎಂಬ ನಂಬಿಕೆಯೊಂದಿಗೆ ಸೇವೆ ಸಲ್ಲಿಸಿದ ಅವರಿಗೆ ಇದೀಗ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಒಲಿದುಬಂದಿರುವುದು ಅವರ ವಿದ್ಯಾರ್ಥಿಗಳು ಮತ್ತು ಹಿತೈಷಿಗಳಲ್ಲಿ ಸಂತಸ ಮೂಡಿಸಿದೆ.
1967ರಲ್ಲಿ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಜನಿಸಿದ ಆರ್.ಐ. ನಾಯ್ಕ ಅವರು ಬೆಳೆದದ್ದು ಯಲ್ಲಾಪುರದಲ್ಲಿ. ಬೇಲೂರು, ಕೊಡಸೆ, ಸಾತನಕೊಪ್ಪ, ನಂದೊಳ್ಳಿ ಹಾಗೂ ಯಲ್ಲಾಪುರದ ಗಣಪತಿಗಲ್ಲಿ ಸೇರಿದಂತೆ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಬಿ.ಆರ್.ಪಿ. ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸದ್ಯ ರಾಮಾಪುರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜನ ಮೆಚ್ಚಿದ ಶಿಕ್ಷಕ, ಸ್ಕೌಟ್ ರಾಜ್ಯಮಟ್ಟದ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಲೈನ್ಸ್ ಕ್ಲಬ್ ಪ್ರಶಸ್ತಿ, ತಾಲೂಕು ಆಡಳಿತದ ಪ್ರಶಂಸೆ, ರಾಜ್ಯ ಮಕ್ಕಳ ಆಯೋಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಶಂಸಾ ಪತ್ರ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ. ಆದರೂ ಪ್ರಚಾರಕ್ಕಾಗಿ ಎಂದಿಗೂ ಹಾತೊರೆದವರಲ್ಲ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ.
ಕೊಡಸೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸಂದರ್ಭದಲ್ಲಿ ನಡೆದ ಘಟನೆಯೊಂದು ಅವರ ಮಕ್ಕಳಪರ ಕಾಳಜಿಯನ್ನು ತೋರಿಸುತ್ತದೆ. ಸರ್ಕಾರದಿಂದ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗಿದ್ದರೂ, ದೂರದ ಪ್ರದೇಶಗಳ ನಾಲ್ವರು ಮಕ್ಕಳು ಶಾಲೆಗೆ ಗೈರಾಗಿದ್ದ ಕಾರಣ ಅವರಿಗೆ ಸಮವಸ್ತ್ರ ತಲುಪಿರಲಿಲ್ಲ. ಈ ಮಕ್ಕಳನ್ನು ಶಾಲೆಗೆ ಕರೆತರಬೇಕೆಂಬ ಉದ್ದೇಶದಿಂದ ಶನಿವಾರ ಮಧ್ಯಾಹ್ನ ವಿದ್ಯಾರ್ಥಿಯೊಬ್ಬನನ್ನು ಕರೆದುಕೊಂಡು ಅವರ ಮನೆಗಳನ್ನು ಹುಡುಕುತ್ತಾ ಸುಮಾರು ಹತ್ತು ಕಿಲೋಮೀಟರ್ ತೆರಳಿದ ನಾಯ್ಕ, ಪೋಷಕರ ಮನವೊಲಿಸಿ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅಂದು ಅವರು ತೋರಿದ ಈ ಕಾಳಜಿ ಇಂದಿಗೂ ಅವರ ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿದಿದೆ.
ಮಕ್ಕಳ ಶಿಕ್ಷಣದ ಜೊತೆಗೆ ಅವರ ಆರೋಗ್ಯ ಮತ್ತು ಸುರಕ್ಷತೆಗೂ ಅವರು ಆದ್ಯತೆ ನೀಡಿದ್ದಾರೆ. ಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು, ಎಫ್ಎಲ್ಎನ್ ಸಾಧನೆಗೆ ಶ್ರಮಿಸುವುದು, ಕಲಿಕೆಗೆ ಪ್ರೊಜೆಕ್ಟರ್ ಹಾಗೂ ಸಂವಹನ ಕೌಶಲ್ಯ ಬೆಳೆಸಲು ಮೈಕ್ ವ್ಯವಸ್ಥೆ ಕಲ್ಪಿಸುವಂತಹ ಹಲವು ಕಾರ್ಯಗಳನ್ನು ಸ್ವಂತ ಖರ್ಚಿನಲ್ಲಿ ಮಾಡಿದ್ದಾರೆ. 1993ರಲ್ಲಿ ಶಾಲೆಯಿಂದ ಹೊರಗುಳಿದ ಏಕಪಾಲಕ ಕುಟುಂಬದ ಮಗುವೊಂದನ್ನು ಮತ್ತೆ ಶಾಲೆಗೆ ದಾಖಲಿಸಿದ ಅವರ ಪ್ರಯತ್ನದ ಫಲವಾಗಿ ಆ ವಿದ್ಯಾರ್ಥಿನಿ ಇಂದು ಪಿಎಚ್ಡಿ ಪದವಿಧರೆಯಾಗಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಅವರ ಶಿಕ್ಷಕ ಸೇವೆಯ ಹೆಮ್ಮೆಯ ಸಂಗತಿಯಾಗಿದೆ.
ಹಸಿದು ಶಾಲೆಗೆ ಬರುತ್ತಿದ್ದ ಮಕ್ಕಳಿಗಾಗಿ ಸ್ವಂತ ಖರ್ಚಿನಲ್ಲಿ 5,500 ಬೆಳಗಿನ ಉಪಾಹಾರಗಳನ್ನು ವಿತರಿಸಿದ್ದು, ಸಾರ್ವಜನಿಕರ ನೆರವಿನಿಂದ ಮತ್ತಷ್ಟು 500 ಉಪಾಹಾರಗಳನ್ನು ಒದಗಿಸಿದ್ದಾರೆ. ಒಟ್ಟಾರೆ 6,000 ಉಪಾಹಾರಗಳ ವಿತರಣೆ ಅವರ ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾಗಿದೆ. ಕೋವಿಡ್ ಅವಧಿಯಲ್ಲಿ ಮಕ್ಕಳ ಮನೆ ಬಾಗಿಲಿಗೆ ಸ್ವಂತ ಖರ್ಚಿನಲ್ಲಿ ಸುಮಾರು 25 ಸಾವಿರ ಬಾಳೆಹಣ್ಣುಗಳನ್ನು ತಲುಪಿಸಿದ್ದಾರೆ. ಶಿಕ್ಷಣದ ಸಂಪರ್ಕ ಕಡಿದುಹೋಗದಂತೆ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ‘ವಿದ್ಯಾಗಮ ಕಲಾ ಮಂದಿರ’ ನಿರ್ಮಿಸಿಕೊಟ್ಟಿದ್ದಾರೆ.
‘ನನ್ನ ದೇಶ, ನನ್ನ ಕೊಡುಗೆ’ ಎಂಬ ಸಂಕಲ್ಪದೊಂದಿಗೆ 2019ರಿಂದ ದೇಶದ ರಕ್ಷಣಾ ನಿಧಿ, ಪ್ರಧಾನಮಂತ್ರಿಗಳ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರತಿ ತಿಂಗಳು ತಲಾ 500 ರೂ.ನಂತೆ ದೇಣಿಗೆ ನೀಡುತ್ತಿದ್ದಾರೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯ 5 ಸಾವಿರ ರೂ. ಮೊತ್ತವನ್ನೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಇದರ ಜೊತೆಗೆ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತಿದ್ದು, ‘ವ್ಯಸನಮುಕ್ತ, ಮೌಢ್ಯಮುಕ್ತ ಸಮಾಜ’ ನಿರ್ಮಾಣಕ್ಕಾಗಿ ಶಾಲಾ-ಕಾಲೇಜುಗಳಲ್ಲಿ 15 ಚಿಂತನ ಸಭೆಗಳನ್ನು ನಡೆಸಿ ಸುಮಾರು 1,600 ಮಕ್ಕಳಲ್ಲಿ ಜಾಗೃತಿ ಮೂಡಿಸಿದ್ದಾರೆ.
ಯಲ್ಲಾಪುರದ ಗಣಪತಿಗಲ್ಲಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಮ್ಮ ಮಗನನ್ನೂ ಇದೇ ಸರ್ಕಾರಿ ಶಾಲೆಯಲ್ಲಿ ಓದಿಸಿರುವುದು ಅವರ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಗೆ ಸಾಕ್ಷಿಯಾಗಿದೆ. ಶಾಲೆಯ ಉತ್ತಮ ಪರಿಸರ, ನಲಿ-ಕಲಿ ರಾಜ್ಯಮಟ್ಟದ ಉತ್ತಮ ಶಾಲೆ ಹಾಗೂ ಸ್ವಚ್ಛ ಶಾಲೆ 5 ಸ್ಟಾರ್ ರೇಟಿಂಗ್ ಸೇರಿದಂತೆ ಹಲವು ಸಾಧನೆಗಳ ಹಿಂದೆ ಶಿಕ್ಷಕರ ಸಮೂಹದೊಂದಿಗೆ ಅವರ ಪ್ರಯತ್ನವೂ ಇದೆ.
2026-27ನೇ ಸಾಲು ತಮ್ಮ ಸೇವಾ ನಿವೃತ್ತಿಯ ವರ್ಷವಾಗಿದ್ದರೂ, ಕೊನೆಯ ದಿನದವರೆಗೂ ನಿಷ್ಠೆ ಮತ್ತು ಬದ್ಧತೆಯಿಂದ ಕೆಲಸ ಮಾಡುವ ಸಂಕಲ್ಪ ಹೊಂದಿರುವುದಾಗಿ ಆರ್.ಐ. ನಾಯ್ಕ ಹೇಳುತ್ತಾರೆ. ನಿವೃತ್ತಿಯ ಬಳಿಕವೂ ರಾಷ್ಟ್ರ, ರಾಜ್ಯ ಹಾಗೂ ಸಮಾಜಕ್ಕಾಗಿ ಸ್ವಯಂ ಜಾಗೃತಿ ಮತ್ತು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಸಮಯ ಮೀಸಲಿಡುವ ಉದ್ದೇಶ ಅವರದು.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಗುರುಗಳು, ಕುಟುಂಬದವರು, ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಪಾಲಕರು, ಹಿತೈಷಿಗಳು ಹಾಗೂ ಮಾಧ್ಯಮ ಮಿತ್ರರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಈ ಗೌರವವನ್ನು ತಮ್ಮೊಂದಿಗೆ ನಡೆದು ಬಂದ ಎಲ್ಲರಿಗೂ ಸಮರ್ಪಿಸಿದ್ದಾರೆ.
ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆ ತರುವುದು ಶಿಕ್ಷಕನ ನಿಜವಾದ ಸಾಧನೆ. ಆರ್.ಐ. ನಾಯ್ಕ ಅವರ ದೀರ್ಘ ಸೇವಾ ಪಯಣಕ್ಕೆ ಸಂದಿರುವ ರಾಜ್ಯಮಟ್ಟದ ಗೌರವ, ಅವರ ಸೇವಾಭಾವನೆಗೆ ಸಂದಿರುವ ಸಾರ್ಥಕ ಮನ್ನಣೆಯಾಗಿದೆ.
“ಅತ್ಯಂತ ಪಾರದರ್ಶಕವಾಗಿ ನಡೆದ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಆಯ್ಕೆ ಸಮಿತಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಲಾಖೆಯ ಅಧಿಕಾರಿವೃಂದ, ನನ್ನ ಗುರುಗಳು, ಕುಟುಂಬದವರು, ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಪಾಲಕ ಬಂಧುಗಳು, ಹಿತೈಷಿಗಳು ಹಾಗೂ ಮಾಧ್ಯಮ ಮಿತ್ರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ದೊರೆತಿರುವ ಈ ಗೌರವವನ್ನು ನನ್ನೊಂದಿಗೆ ನಿಂತು ಪ್ರೋತ್ಸಾಹಿಸಿದ ಎಲ್ಲರಿಗೂ ಸಮರ್ಪಿಸುತ್ತೇನೆ.”
— ಶ್ರೀ ಆರ್.ಐ. ನಾಯ್ಕ
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರು, ಯಲ್ಲಾಪುರ.
– ಪ್ರಶಾಂತ ಹೆಗ್ಗಾರ.