ಯಲ್ಲಾಪುರ: ಶಿಕ್ಷಕ ವೃತ್ತಿ ಕೇವಲ ಪಾಠ ಬೋಧಿಸುವ ಕೆಲಸವಷ್ಟೇ ಅಲ್ಲದೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿಯೂ ಹೌದು. ಇಂತಹ ಸೇವಾ ಮನೋಭಾವದೊಂದಿಗೆ ಎರಡು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಂದೊಳ್ಳಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕಿ ಅರ್ಚನಾ ನಾಯ್ಕ ಅವರು 2026-27ನೇ ಸಾಲಿನ ಯಲ್ಲಾಪುರ ತಾಲೂಕು ಮಟ್ಟದ ʻಉತ್ತಮ ಶಿಕ್ಷಕʼ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2006ರ ಜನವರಿ 13ರಂದು ಶಿಕ್ಷಕ ವೃತ್ತಿಗೆ ಸೇರ್ಪಡೆಯಾದ ಅರ್ಚನಾ ನಾಯ್ಕ ಅವರು 20 ವರ್ಷಗಳ ಸೇವಾನುಭವ ಹೊಂದಿದ್ದಾರೆ. 2015ರಲ್ಲಿ ನಂದೊಳ್ಳಿ ಪ್ರೌಢಶಾಲೆಗೆ ಆಗಮಿಸಿದ ಅವರು, ಅಂದಿನಿಂದಲೂ ಆಂಗ್ಲ ಭಾಷಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಇಂಗ್ಲಿಷ್ ಕಲಿಕೆಯಲ್ಲಿ ಹಿಂದುಳಿಯಬಾರದು ಎಂಬ ಉದ್ದೇಶದಿಂದ ಪ್ರಯಿಯೊಬ್ಬ ವಿದ್ಯಾರ್ಥಿಯ ಬಗೆಗೂ ವಿಶೇಷ ಕಾಳಜಿ ವಹಿಸಿ ಪಾಠ ಬೋಧಿಸುವುದು ಇವರ ವಿಶೇಷತೆಯಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ವಿಶೇಷ ಗಮನ ನೀಡಿರುವ ಅರ್ಚನಾ ನಾಯ್ಕ ಅವರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿದ ಹಿನ್ನೆಲೆಯಲ್ಲಿ ಧಾರವಾಡದ ಎಚ್.ಎಫ್. ಕಟ್ಟಿಮನಿ ಫೌಂಡೇಷನ್ ನೀಡುವ ಪ್ರತಿಷ್ಠಿತ ಕಟ್ಟಿಮನಿ ಪ್ರಶಸ್ತಿ ಎರಡು ಬಾರಿ ಲಭಿಸಿದೆ. ಇದೀಗ ಅವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ.
ಅರ್ಚನಾ ನಾಯ್ಕ ಅವರ ಆಯ್ಕೆಗೆ ನಂದೊಳ್ಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಪಾಲಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.