Sunday, September 6, 2026
Join WhatsApp Group
HomeYour Voiceನೋಟಿಫಿಕೇಶನ್‌ಗಳ ನಡುವೆ ಕಳೆದುಹೋದ ನೆಮ್ಮದಿ

ನೋಟಿಫಿಕೇಶನ್‌ಗಳ ನಡುವೆ ಕಳೆದುಹೋದ ನೆಮ್ಮದಿ

ಪ್ರಸ್ತುತ ದಿನಗಳಲ್ಲಿ ‘ನೋಟಿಫಿಕೇಶನ್‌’ ಎಂಬುದು ಪ್ರತಿಯೊಬ್ಬರ ದಿನಚರಿಯ ಭಾಗವಾಗಿಬಿಟ್ಟಿದೆ. ಮೆಸೇಜ್‌ಗಳು, ಸ್ಟೇಟಸ್‌ಗಳು, ಇನ್‌ಸ್ಟಾಗ್ರಾಂ ಸ್ಟೋರಿಗಳು, ಪೋಸ್ಟ್‌ಗಳು, ರೀಲ್ಸ್‌ಗಳು… ಹೀಗೆ ಮೊಬೈಲ್‌ನಲ್ಲಿ ಬರುವ ಪ್ರತಿಯೊಂದು ಸೂಚನೆಯೂ ನಮ್ಮ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ನಿಧಾನವಾಗಿ ಮೊಬೈಲ್‌ ನಮ್ಮ ಅಗತ್ಯವಾಗುವುದರ ಜೊತೆಗೆ, ಅದೊಂದು ಜೀವನಶೈಲಿಯೂ ಆಗಿಬಿಟ್ಟಿದೆ.

ಒಂದು ಕಾಲದಲ್ಲಿ ಮೊಬೈಲ್‌ ಫೋನ್‌ಗಳ ಬಳಕೆಗೆ ಇಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ. ಆಗ ಪ್ರಕೃತಿಯೇ ನಮ್ಮ ದಿನಚರಿಯ ಭಾಗವಾಗಿತ್ತು. ಬೆಳಗ್ಗೆ ಸೂರ್ಯನ ಕಿರಣ ಕಣ್ಣಿಗೆ ತಾಕುವುದು, ಹಕ್ಕಿಗಳ ಚಿಲಿಪಿಲಿ ಕಲರವ ಕೇಳುವುದು ನಮ್ಮನ್ನು ಎಚ್ಚರಿಸುತ್ತಿತ್ತು. ಆದರೆ ಇಂದು ಅಲಾರಂ ಇಲ್ಲದೆ ಎಚ್ಚರಗೊಳ್ಳುವುದು ಕಷ್ಟವಾಗಿದೆ. ಎದ್ದ ತಕ್ಷಣ ಮೊಬೈಲ್‌ ಕೈಗೆ ಬರುತ್ತದೆ. ನಂತರ ಅದರಲ್ಲಿರುವ ಸ್ಟೇಟಸ್‌, ಇನ್‌ಸ್ಟಾಗ್ರಾಂ ಸ್ಟೋರಿ, ಪೋಸ್ಟ್‌ ಮತ್ತು ರೀಲ್ಸ್‌ಗಳನ್ನು ನೋಡುವುದರೊಂದಿಗೆ ನಮ್ಮ ದಿನ ಆರಂಭವಾಗುತ್ತದೆ.

ಆದರೆ ಹಿಂದಿನ ದಿನಗಳಲ್ಲಿ ದಿನದ ಆರಂಭವೇ ವಿಭಿನ್ನವಾಗಿತ್ತು. ಎದ್ದೊಡನೆ ದೇವರ ಸ್ತುತಿ ಮಾಡುವುದು, ದೇವರಿಗೆ ಕೈಮುಗಿದು ದಿನವನ್ನು ಆರಂಭಿಸುವುದು ಹಲವರ ಅಭ್ಯಾಸವಾಗಿತ್ತು. ಮೊಬೈಲ್‌ ನೋಟಿಫಿಕೇಶನ್‌ಗಳ ಬದಲು ಮನಸ್ಸಿಗೆ ನೆಮ್ಮದಿ ನೀಡುವ ವಿಚಾರಗಳು ಮುಂಜಾನೆಯ ಸಂಗಾತಿಯಾಗಿದ್ದವು.

ಹಿಂದೆ ಬರವಣಿಗೆ, ಪುಸ್ತಕ, ಕಾದಂಬರಿ ಓದುವ ಹವ್ಯಾಸ ಬಹುತೇಕರಲ್ಲಿತ್ತು. ಬೆಳಗ್ಗೆ ವಾರ್ತಾಪತ್ರಿಕೆ ಓದದೆ ದಿನ ಆರಂಭವಾಗದಂತಹ ವಾತಾವರಣವೂ ಇತ್ತು. ಆದರೆ ಇಂದು ಕೈಯಲ್ಲೊಂದು ಮೊಬೈಲ್‌ ಇದ್ದರೆ ಸಾಕು. ಅದರಲ್ಲಿನ ನೋಟಿಫಿಕೇಶನ್‌ಗಳು, ರೀಲ್ಸ್‌ಗಳು ಮತ್ತು ಸಂದೇಶಗಳು ನಮ್ಮ ಗಮನವನ್ನು ನಿರಂತರವಾಗಿ ಸೆಳೆಯುತ್ತವೆ.

ಹಿಂದೆ ಯಾರಾದರೂ ಮಾತನಾಡಿಸಿದರೆ ಆತ್ಮೀಯತೆ ಮೂಡುತ್ತಿತ್ತು. ಪರಿಚಯಗಳು ಸಂಬಂಧಗಳಾಗಿ, ಸಂಬಂಧಗಳು ಸ್ನೇಹವಾಗಿ ಬೆಳೆಯುತ್ತಿದ್ದವು. ಆದರೆ ಇಂದು ಪಕ್ಕದಲ್ಲೇ ಕುಳಿತಿರುವ ವ್ಯಕ್ತಿಗಿಂತ ಕೈಯಲ್ಲಿರುವ ಮೊಬೈಲ್‌ ಹೆಚ್ಚು ಆಪ್ತವಾಗುತ್ತಿರುವಂತಿದೆ. ಯಾರೊಂದಿಗೂ ಹೆಚ್ಚು ಸಲಿಗೆಯಿಂದ ಮಾತನಾಡಲು, ಆತ್ಮೀಯವಾಗಿ ಬೆರೆಯಲು ಸಮಯವಿಲ್ಲ. ಏಕೆಂದರೆ ಮೊಬೈಲ್‌ನಲ್ಲಿ ಯಾವಾಗ ಯಾವ ನೋಟಿಫಿಕೇಶನ್‌ ಬರುತ್ತದೆ ಎಂಬುದೇ ಮುಖ್ಯವಾಗಿಬಿಟ್ಟಿದೆ.

ಒಂದು ಕಾಲದಲ್ಲಿ ಮನರಂಜನೆಗಾಗಿ ಮೊಬೈಲ್‌ ನೋಡುತ್ತಿದ್ದೆವು. ಇಂದು ಮೊಬೈಲ್‌ ನೋಡುವುದೇ ಮನರಂಜನೆಯಾಗಿಬಿಟ್ಟಿದೆ. ಊಟದ ಮೇಜಿನಲ್ಲಿಯೂ ಮೊಬೈಲ್‌ ಬೇಕು. ಕುಟುಂಬದವರು ಒಟ್ಟಿಗೆ ಕುಳಿತು ಮಾತನಾಡುತ್ತಾ, ತಮ್ಮ ದಿನದ ಅನುಭವಗಳನ್ನು ಹಂಚಿಕೊಳ್ಳುತ್ತಾ, ಆಹಾರದ ಸವಿಯನ್ನು ಆಸ್ವಾದಿಸುತ್ತಿದ್ದ ದಿನಗಳು ಈಗ ನಿಧಾನವಾಗಿ ಮರೆಯಾಗುತ್ತಿವೆ. ಊಟ ಮಾಡುವಾಗಲೂ ರೀಲ್ಸ್‌ ನೋಡಬೇಕು, ನೋಟಿಫಿಕೇಶನ್‌ಗಳನ್ನು ಪರಿಶೀಲಿಸಬೇಕು ಎಂಬ ಅಭ್ಯಾಸ ಬೆಳೆದಿದೆ.

ಹೀಗೆ ನಮ್ಮ ಪ್ರತಿದಿನದ ಸವಿ ಕ್ಷಣಗಳು, ಕುಟುಂಬದೊಂದಿಗಿನ ವಿಶೇಷ ಸಮಯ, ಸ್ನೇಹಿತರೊಂದಿಗಿನ ಆತ್ಮೀಯ ಮಾತುಕತೆ ಎಲ್ಲವನ್ನೂ ಅಂಗೈ ಅಗಲದ ಮೊಬೈಲ್‌ ಮತ್ತು ಅದರಲ್ಲಿನ ನೋಟಿಫಿಕೇಶನ್‌ಗಳು ನಿಧಾನವಾಗಿ ನುಂಗುತ್ತಿವೆ.

ಇದು ಕೇವಲ ತಂತ್ರಜ್ಞಾನದ ಬದಲಾವಣೆಯಲ್ಲ. ನಮ್ಮ ಜೀವನಶೈಲಿಯಲ್ಲಾದ ದೊಡ್ಡ ಬದಲಾವಣೆ. ಮೊಬೈಲ್‌ ನಮ್ಮ ಕೆಲಸವನ್ನು ಸುಲಭಗೊಳಿಸಿದೆ, ಜಗತ್ತನ್ನು ನಮ್ಮ ಅಂಗೈಗೆ ತಂದಿದೆ. ಆದರೆ ಅದೇ ಸಮಯದಲ್ಲಿ ನಮ್ಮ ಗಮನವನ್ನು ತುಂಡರಿಸಿದೆ, ಸಂಬಂಧಗಳ ನಡುವಿನ ಅಂತರವನ್ನು ಹೆಚ್ಚಿಸಿದೆ ಮತ್ತು ನೆಮ್ಮದಿಯ ಕ್ಷಣಗಳನ್ನು ಕಸಿದುಕೊಳ್ಳುತ್ತಿದೆ.

ಇಂದು ನಾವು ನೋಟಿಫಿಕೇಶನ್‌ಗಳನ್ನು ನೋಡುತ್ತಿದ್ದೇವೆಯೋ, ಅಥವಾ ನೋಟಿಫಿಕೇಶನ್‌ಗಳೇ ನಮ್ಮನ್ನು ನಿಯಂತ್ರಿಸುತ್ತಿವೆಯೋ ಎಂಬ ಪ್ರಶ್ನೆಯನ್ನು ಒಮ್ಮೆ ನಮ್ಮಲ್ಲೇ ಕೇಳಿಕೊಳ್ಳಬೇಕಾಗಿದೆ.

ಇದು ‘ಜೆಂಜೀ’ ಜಗತ್ತಲ್ಲ… ನೋಟಿಫಿಕೇಶನ್‌ ಅವಲಂಬಿತ ಜಗತ್ತಾಗಿ ಬದಲಾಗುತ್ತಿರುವ ಜಗತ್ತು. ಸಂಬಂಧಗಳಿಗಿಂತ ಸ್ಕ್ರೀನ್‌ ಮುಖ್ಯವಾಗುತ್ತಿರುವ ಈ ಕಾಲದಲ್ಲಿ, ಒಂದಷ್ಟು ಸಮಯ ಮೊಬೈಲ್‌ನ್ನು ಬದಿಗಿಟ್ಟು ನಮ್ಮ ಸುತ್ತಲಿನ ಮನುಷ್ಯರನ್ನು, ಪ್ರಕೃತಿಯನ್ನು ಮತ್ತು ನಮ್ಮನ್ನೇ ನಾವು ಗಮನಿಸುವ ಅಗತ್ಯವಿದೆ.

ಏಕೆಂದರೆ… ನೋಟಿಫಿಕೇಶನ್‌ಗಳು ನಮ್ಮನ್ನು ಎಚ್ಚರಿಸಬಹುದು. ಆದರೆ ನೆಮ್ಮದಿಯನ್ನು ನೀಡಲಾರವು!

ದಶ್ಮಿತಾ ಕೆ. ಎಂ.
ಎಂ.ಜಿ.ಎಂ.
ಕಾಲೇಜು, ಉಡುಪಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share