ರಾಮನಗರ: ಮನೆ ನಿರ್ಮಾಣಕ್ಕೆ ಸಂಬಂಧಿಸಿದ ರೀಲಿಂಗ್ ಹಾಗೂ ಸ್ಲೈಡಿಂಗ್ ಕೆಲಸ ಮಾಡಿಕೊಡುವುದಾಗಿ ಫೇಸ್‌ಬುಕ್‌ನಲ್ಲಿ ಹಾಕಿದ್ದ ವಿಡಿಯೋಗಳನ್ನು ನಂಬಿ ವ್ಯಕ್ತಿಯೊಬ್ಬರು ₹1.95 ಲಕ್ಷ ಪಾವತಿಸಿದ್ದು, ಹಣ ಪಡೆದ ಬಳಿಕ ಕೆಲಸ ಮಾಡದೆ ವಂಚಿಸಿರುವ ಆರೋಪದ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೋಯಿಡಾ ತಾಲೂಕಿನ ರಾಮನಗರದ ರಾಮಲಿಂಗ ಗಲ್ಲಿಯ ನಿವಾಸಿ, ಉದ್ಯಮಿ ಮಂಗೇಶ ನರಸಿಂಹ ಕಾಮತ (50) ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಫೇಸ್‌ಬುಕ್‌ನಲ್ಲಿ ಹೊಸದಾಗಿ ನಿರ್ಮಿಸುವ ಮನೆಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತಿದ್ದ ವೇಳೆ ಪೂನಮರಾಮ್ ಬಿಸ್ನೋಯಿ ಎಂಬಾತ ರೀಲಿಂಗ್ ಹಾಗೂ ಸ್ಲೈಡಿಂಗ್ ಕೆಲಸ ಮಾಡಿಕೊಡುವ ಕುರಿತು ಹಾಕಿದ್ದ ಫೋಟೋ, ವಿಡಿಯೋಗಳನ್ನು ಗಮನಿಸಿದ್ದರು.
ಕೆಲಸ ಉತ್ತಮವಾಗಿ ಕಂಡಿದ್ದರಿಂದ 2025ರ ಮೇ 9ರಂದು ಫೇಸ್‌ಬುಕ್‌ನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾತನಾಡಿದ್ದು, ಒಟ್ಟು ₹5.50 ಲಕ್ಷಕ್ಕೆ ಕೆಲಸ ಮಾಡಿಕೊಡುವುದಾಗಿ ಮಾತುಕತೆ ನಡೆದಿತ್ತು. ಮುಂಗಡ ಹಣ ನೀಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಮೇ 10ರಂದು ಗೋಪಿಕಿಶನ್ ಎಂಬಾತನ ಮೊಬೈಲ್ ಸಂಖ್ಯೆಗೆ ಫೋನ್‌ಪೇ ಮೂಲಕ ₹45 ಸಾವಿರ ಪಾವತಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕೆಲ ದಿನಗಳಲ್ಲಿ ಕೆಲಸ ಆರಂಭಿಸುವುದಾಗಿ ತಿಳಿಸಿದ್ದರೂ ಬಳಿಕ ಕರೆ ಮಾಡಿದಾಗ ಕೆಲವೊಮ್ಮೆ ಕರೆ ಸ್ವೀಕರಿಸದೆ, ಸ್ವೀಕರಿಸಿದ ಸಂದರ್ಭಗಳಲ್ಲಿ ಕೆಲಸಗಾರರು ರಜೆಯಲ್ಲಿದ್ದು ವಾಪಸ್ ಬಂದ ಬಳಿಕ ಕೆಲಸ ಮಾಡಿಕೊಡುವುದಾಗಿ ಹೇಳುತ್ತಾ ಬಂದಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ ಡಿಸೆಂಬರ್ 16, 2025ರಂದು ಕೆಲಸ ಆರಂಭಿಸುವುದಾಗಿ ಹೇಳಿ ₹2 ಲಕ್ಷ ನೀಡುವಂತೆ ಕೇಳಿದ್ದರಿಂದ ಪೂನಮರಾಮ್ ಬಿಸ್ನೋಯಿ ಎಂಬಾತನ ಎಸ್‌ಬಿಐ ಹುಬ್ಬಳ್ಳಿ ಖಾತೆಗೆ ₹1.50 ಲಕ್ಷವನ್ನು ಎನ್‌ಇಎಫ್‌ಟಿ ಮೂಲಕ ಪಾವತಿಸಿದ್ದಾಗಿ ಮಂಗೇಶ ಕಾಮತ ದೂರಿನಲ್ಲಿ ತಿಳಿಸಿದ್ದಾರೆ. ಹಣ ಪಾವತಿಸಿದ ಬಳಿಕವೂ ಕೆಲಸ ಮಾಡಿಕೊಡದೆ, ಕರೆ ಮಾಡಿದಾಗ ಕೆಲವೊಮ್ಮೆ ಮಾತ್ರ ಪ್ರತಿಕ್ರಿಯಿಸಿ ಕೆಲಸ ಮಾಡಿಕೊಡುವುದಾಗಿ ಹೇಳುತ್ತಾ ಬಂದಿದ್ದಾನೆ ಎಂದು ಆರೋಪಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ರೀಲಿಂಗ್ ಹಾಗೂ ಸ್ಲೈಡಿಂಗ್ ಕೆಲಸಗಳ ಕುರಿತ ಆಕರ್ಷಕ ಫೋಟೋ ಮತ್ತು ವಿಡಿಯೋಗಳನ್ನು ಹಾಕಿ ನಂಬಿಸಿ ಹಣ ಪಡೆದು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸೈಬರ್ ಕ್ರೈಂಗೆ ಮಾಹಿತಿ ನೀಡಿ ದೂರು ನೀಡಿದ್ದಾಗಿ ಹಾಗೂ ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದ ಕಾರಣ ರಾಮನಗರ ಪೊಲೀಸ್ ಠಾಣೆಗೆ ದೂರು ನೀಡುವುದು ವಿಳಂಬವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರ ಪತ್ತೆ ಹಾಗೂ ಹಣ ವಾಪಸ್ ಪಡೆಯುವ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.