Saturday, September 19, 2026
Join WhatsApp Group
HomeLocal Newsಯಲ್ಲಾಪುರ | ಜೋಡುಕೆರೆಯಲ್ಲಿ ಮೊಸಳೆ ಆತಂಕ ನಿವಾರಣೆ!

ಯಲ್ಲಾಪುರ | ಜೋಡುಕೆರೆಯಲ್ಲಿ ಮೊಸಳೆ ಆತಂಕ ನಿವಾರಣೆ!

ಯಲ್ಲಾಪುರ: ಪಟ್ಟಣದ ಜೋಡುಕೆರೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಆಗಾಗ ಕಾಣಿಸಿಕೊಳ್ಳುತ್ತಿದ್ದ ಮೊಸಳೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ.
ಗಣೇಶ ಚತುರ್ಥಿ ಸಂದರ್ಭದಲ್ಲಿ ಪಟ್ಟಣದ ಗಣೇಶ ಮೂರ್ತಿಗಳ ವಿಸರ್ಜನೆ ಇದೇ ಕೆರೆಯ ಭಾಗದಲ್ಲಿ ನಡೆಯಲಿರುವುದರಿಂದ, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕೆರೆಯಲ್ಲಿ ಬಲೆ ಅಳವಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಯಲ್ಲಾಪುರ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಶನಿವಾರ ಜೋಡುಕೆರೆಯಲ್ಲಿ ಮೊಸಳೆ ಪತ್ತೆ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಲು ಕರಾವಳಿ ಭಾಗದ ಡಾ. ಅಶೋಕ್ ನಾಯ್ಕ್ ಡೇರಿಂಗ್ ತಂಡವನ್ನು ಕರೆಸಲಾಗಿತ್ತು. ಈ ವೇಳೆ ಯಲ್ಲಾಪುರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಅಗ್ನಿಶಾಮಕ ವಾಹನ, ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಪತ್ರಕರ್ತರು ಹಾಗೂ ಸಾರ್ವಜನಿಕರು ಸ್ಥಳದಲ್ಲಿದ್ದರು.

ಡೇರಿಂಗ್ ತಂಡದ ಸದಸ್ಯರು ಜೋಡುಕೆರೆಯ ಎರಡೂ ಭಾಗಗಳ ಸುತ್ತಲೂ ಪರಿಶೀಲನೆ ನಡೆಸಿ, ಮೊಸಳೆಯ ಚಲನವಲನದ ಬಗ್ಗೆ ವೀಕ್ಷಿಸಿದರು. ಕಳೆದ 10ರಿಂದ 15 ದಿನಗಳಿಂದ ಯಾವುದೇ ರೀತಿಯ ಮೊಸಳೆಯ ಚಲನವಲನ ಕಂಡುಬಂದಿಲ್ಲ ಎಂಬುದನ್ನು ಪರಿಶೀಲನೆಯ ಬಳಿಕ ಖಚಿತಪಡಿಸಿಕೊಳ್ಳಲಾಯಿತು.

ಹೀಗಾಗಿ ಸದ್ಯ ಮೊಸಳೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಅಗತ್ಯ ಕಂಡುಬಂದಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ. ಆದರೆ, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಯಲ್ಲಾಪುರ ಪಟ್ಟಣದ ಗಣೇಶ ಮೂರ್ತಿಗಳನ್ನು ಶ್ರೀ ಮಾರುತಿ ದೇವಸ್ಥಾನದ ಬಳಿಯ ಜೋಡುಕೆರೆಯ ಭಾಗದಲ್ಲಿ ವಿಸರ್ಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೆರೆಯ ಬಳಿ ಸೇರುವುದರಿಂದ ಯಾವುದೇ ರೀತಿಯ ಅನಾಹುತಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಮೊಸಳೆ ಕೆರೆಯ ಕೆಳಭಾಗದಿಂದ ಮೇಲ್ಭಾಗದ ದಡದತ್ತ ಬಾರದಂತೆ ತಡೆಯಲು ನೀರಿನಲ್ಲಿ ಅಳವಡಿಸುವ ಬಲೆಯನ್ನು ಕೆರೆಯ ಮಧ್ಯಭಾಗದಲ್ಲಿ ಹಾಕಲು ಡೇರಿಂಗ್ ತಂಡದವರು ನಿರ್ಧರಿಸಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರು ಈ ಬಲೆಯನ್ನು ದಾಟದಂತೆ ಅರಣ್ಯ ಇಲಾಖೆ ವಿಶೇಷವಾಗಿ ಮನವಿ ಮಾಡಿದೆ.

ಮೊಸಳೆಯ ಚಲನವಲನ ಸದ್ಯ ಕಂಡುಬಂದಿಲ್ಲವಾದರೂ, ಹಬ್ಬದ ಸಂದರ್ಭದಲ್ಲಿ ಜನರ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಸಾರ್ವಜನಿಕರೂ ಸಹ ವಿಸರ್ಜನೆ ಸಂದರ್ಭದಲ್ಲಿ ಸೂಚನೆಗಳನ್ನು ಪಾಲಿಸಿ, ಕೆರೆಯೊಳಗೆ ಅನಗತ್ಯವಾಗಿ ಇಳಿಯದಂತೆ ಹಾಗೂ ಅಳವಡಿಸಿರುವ ಬಲೆಯನ್ನು ದಾಟದಂತೆ ಎಚ್ಚರಿಕೆ ವಹಿಸಬೇಕಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share