Friday, September 18, 2026
Join WhatsApp Group
HomeCrimeಅಂಗಡಿ ತೆರವು ವಿಚಾರಕ್ಕೆ ಗಲಾಟೆ: ಕೊಲೆ ಬೆದರಿಕೆ ಆರೋಪ

ಅಂಗಡಿ ತೆರವು ವಿಚಾರಕ್ಕೆ ಗಲಾಟೆ: ಕೊಲೆ ಬೆದರಿಕೆ ಆರೋಪ

ಹೊನ್ನಾವರ: ಅಂಗಡಿ ತೆರವುಗೊಳಿಸುವ ವಿಚಾರವಾಗಿ ಉಂಟಾದ ವಿವಾದದ ವೇಳೆ ಕಿರಾಣಿ ಅಂಗಡಿ ಮಾಲೀಕರ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊನ್ನಾವರ ತಾಲೂಕಿನ ಅಳ್ಳಂಕಿ ಗ್ರಾಮದ ನಿವಾಸಿ, 65 ವರ್ಷದ ಕಾಂತು ರಾಮದಾಸ ನಾಯ್ಕ ಅವರು ನೀಡಿದ ದೂರಿನ ಆಧಾರದ ಮೇಲೆ ಅಳ್ಳಂಕಿ ಗ್ರಾಮದ ವಿರೇಂದ್ರ ರಾಧಾಕೃಷ್ಣ ಕೋಚ್ರೇಕರ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಹೆದ್ದಾರಿ ಪಕ್ಕದಲ್ಲಿರುವ ಕಿರಾಣಿ ಅಂಗಡಿಯನ್ನು ಕಾಂತು ನಾಯ್ಕ ಅವರು ಕಳೆದ 32 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ನಿಯಮಾನುಸಾರ ಜಿಎಸ್‌ಟಿಯನ್ನೂ ಪಾವತಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ಕಳೆದ ಏಳು ತಿಂಗಳಿನಿಂದ ಆರೋಪಿತ ವಿರೇಂದ್ರ, ತಮ್ಮ ಅಂಗಡಿಯೂ ಇದೇ ಸ್ಥಳದಲ್ಲಿದೆ ಎಂದು ಆಕ್ಷೇಪಿಸಿ ಪೊಲೀಸರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸುತ್ತಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಆಗಸ್ಟ್ 21ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೊನ್ನಾವರ ತಹಶೀಲ್ದಾರರು ಅಂಗಡಿಗೆ ಬಂದು ವಿಚಾರಣೆ ನಡೆಸುತ್ತಿದ್ದ ವೇಳೆ ಆರೋಪಿತರೂ ಅಲ್ಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ದೂರುದಾರರು, ಅವರ ಮಕ್ಕಳಾದ ಧೀರಜ ಹಾಗೂ ಅಂಗಡಿಯ ಕೆಲಸಗಾರರಾದ ಪವನ ಮತ್ತು ಗುರು ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಂತರ ದೂರುದಾರರಿಗೆ ಅವಾಚ್ಯವಾಗಿ ನಿಂದಿಸಿ, ಅಂಗಡಿಯನ್ನು ಇಲ್ಲಿಂದ ತೆರವುಗೊಳಿಸದಿದ್ದರೆ ಬಿಡುವುದಿಲ್ಲ ಎಂದು ಬೆದರಿಸಿ, ಅವರನ್ನು ಎಳೆದು ಮುಷ್ಟಿಯಿಂದ ಮೂಗು ಹಾಗೂ ಬಲಗಣ್ಣಿನ ಕೆಳಭಾಗಕ್ಕೆ ಹೊಡೆದಿದ್ದು, ಗಾಯವಾಗಿ ರಕ್ತಸ್ರಾವವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟೇ ಅಲ್ಲದೆ, ಮತ್ತೊಮ್ಮೆ ಸಿಕ್ಕಾಗ ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಾಂತು ನಾಯ್ಕ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share