Ad
Home Local News ಸದಸ್ಯರ ಸಹಕಾರದಿಂದ ಸಂಘ ಲಾಭದ ಹಾದಿಯಲ್ಲಿ: ಅಧ್ಯಕ್ಷ ನಾಗರಾಜ ಕವಡಿಕೆರೆ

ಸದಸ್ಯರ ಸಹಕಾರದಿಂದ ಸಂಘ ಲಾಭದ ಹಾದಿಯಲ್ಲಿ: ಅಧ್ಯಕ್ಷ ನಾಗರಾಜ ಕವಡಿಕೆರೆ

0
3

ಯಲ್ಲಾಪುರ: ಈ ಸಲದ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ನಮ್ಮದೇ ಸ್ವಂತ ಕಟ್ಟಡದಲ್ಲಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯ ವ್ಯಾಪಾರ ಮಳಿಗೆಯಿಂದ ಆದಾಯ ಬರುತ್ತಿದ್ದು, ಸದಸ್ಯರ ಸಹಕಾರದಿಂದ ಸಂಘ ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ನಾಗರಾಜ ಕವಡಿಕೆರೆ ಹೇಳಿದರು.

ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಹಿನ್ನೆಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಸಂಘದ ಪ್ರಗತಿ ಹಾಗೂ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಸಂಘದ ನಂದೊಳ್ಳಿ ಹಾಗೂ ಉಪಳೇಶ್ವರ ಶಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಂಘದ ವತಿಯಿಂದ ಪೆಟ್ರೋಲ್ ಪಂಪ್ ಆರಂಭಿಸುವ ಉದ್ದೇಶವಿತ್ತಾದರೂ ಜಾಗದ ಕೊರತೆಯಿಂದ ಅದು ಸಾಧ್ಯವಾಗಿಲ್ಲ. ಇದೀಗ ಎಚ್‌ಪಿ ಗ್ಯಾಸ್ ಏಜೆನ್ಸಿ ಮಂಜೂರಾತಿ ಹಂತದಲ್ಲಿದ್ದು, ಬಿಸಗೋಡ ರಸ್ತೆಯಲ್ಲಿ ಅಗತ್ಯ ಜಾಗವನ್ನು ಖರೀದಿಸಲಾಗಿದೆ ಎಂದು ನಾಗರಾಜ ಕವಡಿಕೆರೆ ತಿಳಿಸಿದರು.

ಪರ್ಯಾಯ ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಂಘದ ವತಿಯಿಂದ ಕಾಫಿ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಂಘದ ಸದಸ್ಯರಿಗೆ ಕಾಫಿ ಸಸಿಗಳನ್ನು ತಲಾ ₹8ಕ್ಕೆ ಪೂರೈಸುವ ಯೋಜನೆಗೆ ಸಿದ್ಧತೆ ನಡೆಸಲಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವಿಹಾನ್ ಆಸ್ಪತ್ರೆಯ ಸಹಕಾರದೊಂದಿಗೆ ಸಂಘದ ಸದಸ್ಯರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಪರೀಕ್ಷಾ ಪ್ಯಾಕೇಜ್ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಸದಸ್ಯರೆಲ್ಲರೂ ಸಂಘದ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಘವು ₹53.57 ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.7ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. ಮಾಧ್ಯಮಿಕ ಸಾಲಕ್ಕೆ ಉತ್ತೇಜನ ನೀಡಲಾಗುತ್ತಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅವರು ಕೆಡಿಸಿಸಿ ಬ್ಯಾಂಕ್ ಮೂಲಕ ಮಾಧ್ಯಮಿಕ ಸಾಲದ ಅರ್ಜಿಗಳಿಗೆ ಮಂಜೂರಾತಿ ದೊರಕಿಸಲು ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬೆಳೆ ವಿಮೆ ಲಾಭ ದೊರಕುವಂತೆ ಮಾಡಲು ಪ್ರಯತ್ನಿಸಿದ್ದಾರೆ. ಅವರಿಗೂ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇವೆ. ಇಬ್ಬರು ಸದಸ್ಯರಿಗೆ ಅಪಘಾತ ವಿಮಾ ಪರಿಹಾರ ದೊರಕಿಸಿಕೊಡಲಾಗಿದೆ ಎಂದು ನಾಗರಾಜ ಕವಡಿಕೆರೆ ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಟಿ.ಆರ್. ಹೆಗಡೆ ತೊಂಡೆಕೆರೆ, ನಿರ್ದೇಶಕರಾದ ರಾಮಕೃಷ್ಣ ಸುಬ್ರಾಯ ಭಟ್ಟ ಮುಂಡಗೆಜಡ್ಡಿ, ತಿಮ್ಮಣ್ಣ ಭಟ್ಟ ಘಟ್ಟಿ, ಅಪ್ಪು ಆಚಾರಿ, ಗಾಬ್ರಿಯಲ್ ಫರ್ನಾಂಡೀಸ್, ಮಹಾಬಲೇಶ್ವರ ಭಟ್ಟ ಮಾಲದಮನೆ, ಸುಬ್ರಾಯ ಭಟ್ಟ ಧಾನ್ಯಾನಕೊಪ್ಪ, ರಾಘವೇಂದ್ರ ಭಟ್ ಕಬ್ಬಿನಗದ್ದೆ, ಹನುಮಂತ ಶಿವಪ್ಪ ಕೊರವರ ಹಾಗೂ ವ್ಯವಸ್ಥಾಪಕ ಎಂ.ಎಸ್. ಹೆಗಡೆ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!