ಯಲ್ಲಾಪುರ: ತಾಲೂಕಿನ ಲಿಂಗನಕೊಪ್ಪದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿರುವ 10ನೇ ವರ್ಷದ ಶ್ರೀ ಗಣೇಶೋತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಲಿಂಗನಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ವಿಘ್ನನಿವಾರಕನ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದರು.
ಗ್ರಾಮಸ್ಥರ ಅಭಿಮಾನದ ಕರೆಯ ಮೇರೆಗೆ ಸಂಜೆ ಯಲ್ಲಾಪುರದ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ನಾಯಕ ಅವರು ಭೇಟಿ ನೀಡಿ ಶ್ರೀ ದೇವರ ದರ್ಶನಾಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬದುಕಿನಲ್ಲಿ ಇಂತಹ ಧಾರ್ಮಿಕ ಹಾಗೂ ಸಾಮಾಜಿಕ ಸಂದರ್ಭಗಳು ನಮಗೆ ಎದುರಾಗುತ್ತಲೇ ಇರಬೇಕು. ಇಲ್ಲಿ ಲೋಕ ವಂದಿತ ಗಣೇಶನ ಆಶೀರ್ವಾದ ಪಡೆಯುತ್ತಿರುವುದು ನನ್ನ ಸೌಭಾಗ್ಯ. ನಿಮ್ಮೆಲ್ಲರ ಪ್ರೀತಿ-ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಈ ವೇಳೆ ಶ್ರೀ ಗಜಾನನೋತ್ಸವ ಸಮಿತಿ ವತಿಯಿಂದ ಉದ್ಯಮಿ ಬಾಲಕೃಷ್ಣ ನಾಯಕ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಪ್ರವೀಣ್ ಪಾಟೀಲ್, ನವೀನ್ ಅಂಕೊಲೆಕರ್, ನಿತ್ಯಾನಂದ ಮರಾಠಿ, ದೀಪಕ್ ಮರಾಠಿ, ಗಣೇಶ್ ದೇಶಭಂಡಾರಿ, ಕೇಶವ ಮರಾಠಾ, ನಾಗರಾಜ ಭೋವಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.