Saturday, September 19, 2026
Join WhatsApp Group
HomeLocal Newsದಶಕಗಳ ಸೇವೆಗೆ ಗೌರವಯುತ ವಿದಾಯ

ದಶಕಗಳ ಸೇವೆಗೆ ಗೌರವಯುತ ವಿದಾಯ

20 ವರ್ಷ ಸಮುದ್ರಗಡಿ ಕಾಯ್ದ ‘ಸಾವಿತ್ರಿಬಾಯಿ ಫುಲೆ’ ನೌಕೆಗೆ ನಿವೃತ್ತಿ

ಕಾರವಾರ: ಎರಡು ದಶಕಗಳ ಕಾಲ ಭಾರತದ ಸಮುದ್ರಗಡಿಗೆ ಕಾವಲಾಗಿ, ಅಪಾಯದಲ್ಲಿದ್ದ ಮೀನುಗಾರರು ಮತ್ತು ನಾವಿಕರಿಗೆ ನೆರವಿನ ಹಸ್ತ ಚಾಚಿದ್ದ ಭಾರತೀಯ ಕರಾವಳಿ ರಕ್ಷಣಾ ಪಡೆಯ ‘ಸಾವಿತ್ರಿಬಾಯಿ ಫುಲೆ’ ನೌಕೆಗೆ ಶನಿವಾರ ಕಾರವಾರ ಬಂದರಿನಲ್ಲಿ ಗೌರವಯುತ ವಿದಾಯ ಹೇಳಲಾಯಿತು. 20 ವರ್ಷಗಳ ಸುದೀರ್ಘ ಸೇವೆಯ ಬಳಿಕ ನೌಕೆಯನ್ನು ಅಧಿಕೃತವಾಗಿ ಡಿ-ಕಮಿಷನ್ ಮಾಡಲಾಯಿತು.

ಕಾರವಾರ ಬಂದರಿನ ಕೋಸ್ಟ್ ಗಾರ್ಡ್ ಜೆಟ್ಟಿಯಲ್ಲಿ ಸೂರ್ಯಾಸ್ತದ ಬಳಿಕ ನಡೆದ ಸಮಾರಂಭದಲ್ಲಿ ನೌಕೆಯ ಮೇಲಿದ್ದ ಕೋಸ್ಟ್ ಗಾರ್ಡ್ ಧ್ವಜ ಹಾಗೂ ರಾಷ್ಟ್ರಧ್ವಜವನ್ನು ಕೊನೆಯ ಬಾರಿಗೆ ಗೌರವಪೂರ್ವಕವಾಗಿ ಕೆಳಗಿಳಿಸಲಾಯಿತು. ಬಳಿಕ ನೌಕೆಯ ಉದ್ದಕ್ಕೆ ಸಮನಾದ ವಿಶೇಷ ‘ಪೇಯಿಂಗ್ ಆಫ್ ಪೆನ್ನಂಟ್’ ಅನ್ನು ಕೆಳಗಿಳಿಸುವ ಮೂಲಕ ಅದರ ಸಕ್ರಿಯ ಸೇವೆಗೆ ಅಧಿಕೃತ ತೆರೆ ಎಳೆಯಲಾಯಿತು. ಕೋಸ್ಟ್ ಗಾರ್ಡ್ ಸಿಬ್ಬಂದಿಯಿಂದ ಗೌರವ ವಂದನೆಯನ್ನೂ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೋಸ್ಟ್ ಗಾರ್ಡ್‌ನ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ, ‘ಸಾವಿತ್ರಿಬಾಯಿ ಫುಲೆ’ ಕೇವಲ ಉಕ್ಕು ಮತ್ತು ಯಂತ್ರಗಳಿಂದ ನಿರ್ಮಿಸಲ್ಪಟ್ಟ ನೌಕೆಯಲ್ಲ. ಅದರಲ್ಲಿದ್ದ ಕಮಾಂಡರ್‌ಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮದಿಂದ ಅದು ಜೀವಂತವಾಗಿತ್ತು. ಎರಡು ದಶಕಗಳ ಕಾಲ ಕಠಿಣ ಹವಾಮಾನ, ಮಳೆ ಹಾಗೂ ಬಿರುಗಾಳಿಯ ನಡುವೆಯೂ ಸಮುದ್ರಗಡಿಯಲ್ಲಿ ಗಸ್ತು ತಿರುಗಿ ದೇಶದ ಕರಾವಳಿ ಭದ್ರತೆಯಲ್ಲಿ ನಿರಂತರ ಸೇವೆ ಸಲ್ಲಿಸಿದೆ ಎಂದರು.

ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಮೀನುಗಾರರು ಹಾಗೂ ನಾವಿಕರಿಗೆ ಈ ನೌಕೆ ನೆರವಿನ ಆಶಾಕಿರಣವಾಗಿತ್ತು. ದೇಶದ ಭದ್ರತೆಗೆ ಸವಾಲು ಒಡ್ಡಲು ಯತ್ನಿಸುವ ದುಷ್ಟಶಕ್ತಿಗಳಿಗೆ ಎಚ್ಚರಿಕೆಯ ಸಂಕೇತವಾಗಿಯೂ ಕಾರ್ಯನಿರ್ವಹಿಸಿದೆ ಎಂದು ಅವರು ಹೇಳಿದರು.

ನೌಕೆಯ ಕಮಾಂಡಿಂಗ್ ಆಫೀಸರ್ ಕಮಾಂಡೆಂಟ್ ಗೌರವ್ ಶ್ರೀವಾಸ್ತವ ಮಾತನಾಡಿ, 2006ರ ಅಕ್ಟೋಬರ್ 28ರಂದು ಸೇವೆಗೆ ಸೇರ್ಪಡೆಯಾದ ‘ಸಾವಿತ್ರಿಬಾಯಿ ಫುಲೆ’ ಕಳೆದ 20 ವರ್ಷಗಳಲ್ಲಿ ಸುಮಾರು 78,468 ನಾಟಿಕಲ್ ಮೈಲುಗಳಷ್ಟು ಗಸ್ತು ನಡೆಸಿದೆ ಎಂದು ತಿಳಿಸಿದರು. ಇದೇ ಅವಧಿಯಲ್ಲಿ 14 ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಹಾಗೂ ನಾಲ್ಕು ವೈದ್ಯಕೀಯ ತೆರವು ಕಾರ್ಯಾಚರಣೆಗಳನ್ನು ನಡೆಸಿ 71 ಜೀವಗಳನ್ನು ರಕ್ಷಿಸಿದೆ. ಎರಡು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದರು.

2006-07, 2010-11 ಹಾಗೂ 2014ರಲ್ಲಿ ನೌಕೆಗೆ ಅತ್ಯುತ್ತಮ ‘ಸರ್ಚ್ ಅಂಡ್ ರೆಸ್ಕ್ಯೂ ಯೂನಿಟ್’ ಪ್ರಶಸ್ತಿಯೂ ಲಭಿಸಿದೆ. ಗೋವಾ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಸ್ವದೇಶಿಯಾಗಿ ನಿರ್ಮಿಸಲ್ಪಟ್ಟಿದ್ದ ಈ ನೌಕೆ ಆತ್ಮನಿರ್ಭರತೆಗೆ ಸಾಕ್ಷಿಯಾಗಿತ್ತು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೋಸ್ಟ್ ಗಾರ್ಡ್ ಕಾರವಾರದ ಕಮಾಂಡರ್ ಅಖಿಲ್ ಯಾದವ್, ಡಿಎಫ್‌ಓ ಆಂತೋಣಿ ಮರಿಯಪ್ಪ, ಸಿಐಎಸ್‌ಎಫ್ ಕೈಗಾ ಕಮಾಂಡಿಂಗ್ ಆಫೀಸರ್ ಅಜಯ್ ಕುಮಾರ್ ಝಾ, ನಿವೃತ್ತ ಡಿಐಜಿ ಮನೋಜ್ ಬಾಡ್ಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share