ನದಿಯ ದಿಕ್ಕು ಬದಲಿಸುವ ದುರಾಸೆ: ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮಾರಣಹೋಮ!
ನದಿ ಹುಟ್ಟುವುದು ಬೆಟ್ಟದ ಮಡಿಲಲ್ಲಿ. ಹರಿಯುವುದು ಕಾಡಿನ ನಡುವೆ. ಬದುಕು ಕಟ್ಟುವುದು ನದಿ ದಂಡೆಯ ಮೇಲೆ. ಕೊನೆಗೆ ಸಮುದ್ರ ಸೇರುವುದು ಅದರ ಸಹಜ ಧರ್ಮ. ಇದು ಪ್ರಕೃತಿಯ ನಿಯಮ. ಸಾವಿರಾರು ವರ್ಷಗಳಿಂದ ಭೂಮಿಯ ಜೀವಚಕ್ರವನ್ನು ಮುನ್ನಡೆಸುತ್ತಿರುವ ನೈಸರ್ಗಿಕ ವ್ಯವಸ್ಥೆ. ಆದರೆ ಮನುಷ್ಯನಿಗೆ ಪ್ರಕೃತಿಯ ನಿಯಮಗಳಿಗಿಂತ ತನ್ನ ಸ್ವಾರ್ಥವೇ ದೊಡ್ಡದು! ನದಿಯ ನೀರು ಎಲ್ಲಿ ಹರಿಯಬೇಕು, ಎಲ್ಲಿ ನಿಲ್ಲಬೇಕು, ಯಾವ ದಿಕ್ಕಿಗೆ ತಿರುಗಬೇಕು ಎಂಬುದನ್ನೂ ತಾನೇ ನಿರ್ಧರಿಸುವಷ್ಟು ಅಹಂಕಾರ ಬೆಳೆಸಿಕೊಂಡಿದ್ದಾನೆ. ಅಭಿವೃದ್ಧಿಯ ಹೆಸರಿನಲ್ಲಿ ನದಿಗಳ ಸಹಜ ಹರಿವಿಗೇ ಕೈಹಾಕುವ ಈ ದುರಾಸೆ, ನಾಳಿನ ವಿನಾಶಕ್ಕೆ ಇಂದೇ ಅಡಿಪಾಯ ಹಾಕಿದಂತಿದೆ.
ಸಣ್ಣ ತೊರೆಯಾಗಿ ಹುಟ್ಟುವ ನದಿ ಬೆಟ್ಟಗುಡ್ಡಗಳ ನಡುವೆ ಹರಿಯುತ್ತಾ ಮಣ್ಣನ್ನು ಫಲವತ್ತಾಗಿಸುತ್ತದೆ. ಕಾಡಿನ ತೇವವನ್ನು ಕಾಪಾಡುತ್ತದೆ. ಜಲಚರಗಳಿಗೆ ನೆಲೆ ಒದಗಿಸುತ್ತದೆ. ಅಸಂಖ್ಯಾತ ಜೀವಿಗಳ ಬದುಕಿಗೆ ಆಸರೆಯಾಗುತ್ತದೆ. ಭೂಮಿಯ ಅಂತರ್ಜಲದ ಸಮತೋಲನ, ನದಿ ಪಾತ್ರದ ಪರಿಸರ, ಸಮುದ್ರದ ಜೀವವೈವಿಧ್ಯ ಇವೆಲ್ಲದರೊಂದಿಗೂ ನದಿಯ ಸಹಜ ಹರಿವು ಬೆಸೆದುಕೊಂಡಿದೆ. ನದಿಯನ್ನು ಅದರ ಪಥದಿಂದ ಬಲವಂತವಾಗಿ ತಿರುಗಿಸಿದರೆ ನೀರು ಮಾತ್ರ ತನ್ನ ದಿಕ್ಕು ಬದಲಿಸುವುದಿಲ್ಲ, ಅದರೊಂದಿಗೆ ಇಡೀ ಪರಿಸರ ವ್ಯವಸ್ಥೆಯ ಸಮತೋಲನವೂ ಅಲುಗಾಡುತ್ತದೆ.
ಆದರೆ ಇಂದಿನ ಅಭಿವೃದ್ಧಿಯ ವ್ಯಾಖ್ಯಾನದಲ್ಲಿ ಕಾಡು ಎಂದರೆ ಕತ್ತರಿಸಬಹುದಾದ ಮರಗಳ ಲೆಕ್ಕ. ನದಿ ಎಂದರೆ ಬೇರೆಡೆಗೆ ಸಾಗಿಸಬಹುದಾದ ನೀರಿನ ಪ್ರಮಾಣ. ಬೆಟ್ಟ ಎಂದರೆ ಸುರಂಗ ಕೊರೆಯಬಹುದಾದ ಕಲ್ಲಿನ ರಾಶಿ. ಪ್ರಕೃತಿ ಎಂದರೆ ಯೋಜನೆಗಳ ನಕ್ಷೆಯಲ್ಲಿ ಗೆರೆ ಎಳೆಯಬಹುದಾದ ಖಾಲಿ ಜಾಗ! ಈ ಮನಸ್ಥಿತಿಯೇ ಪರಿಸರ ವಿನಾಶದ ಮೂಲ.
ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರು ಬೇಕಿಲ್ಲ ಎಂದು ಯಾರೂ ಹೇಳುತ್ತಿಲ್ಲ. ಒಂದು ಕಡೆ ನೀರಿನ ಸಂಕಷ್ಟವಿದೆ ಎಂಬ ಕಾರಣಕ್ಕೆ ಇನ್ನೊಂದು ಕಡೆ ಹರಿಯುವ ನದಿಯನ್ನು ಬೇಕಾದಂತೆ ಕತ್ತರಿಸಿ, ತಿರುಗಿಸಿ, ಸಾಗಿಸುವುದೇ ಏಕೈಕ ಪರಿಹಾರವೇ? ಈ ನದಿ ತಿರುವು ಯೋಜನೆಗಳ ಚರ್ಚೆಯಲ್ಲಿ ಮತ್ತೆ ಮತ್ತೆ ಮುನ್ನೆಲೆಗೆ ಬರುವ ಪ್ರಶ್ನೆ, ʻಈ ನೀರು ಅಂತಿಮವಾಗಿ ಯಾರಿಗೆ ಲಾಭ ಮಾಡಿಕೊಡಲಿದೆ?!ʼ
ಬೇಡ್ತಿ-ಅಘನಾಶಿನಿ ನದಿಗಳ ನೀರನ್ನು ತಿರುಗಿಸಿ ಉತ್ತರ ಕರ್ನಾಟಕದ ಒಣ ಪ್ರದೇಶಗಳೆಂದು ಗುರುತಿಸಲ್ಪಟ್ಟ ಗದಗ, ಹಾವೇರಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗ ಭಾಗಕ್ಕೆ ತಲುಪಿಸುವ ಪ್ರಸ್ತಾವನೆಗಳಿವೆ. ಈ ಒಣ ಹಾಗೂ ಅರೆ-ಒಣ ಪ್ರದೇಶಗಳಲ್ಲಿ ಕಬ್ಬು ಬೆಳೆಯುವ ವಿಸ್ತೀರ್ಣ ಹೆಚ್ಚು. ಹಾಗಾಗಿ, ಪಶ್ಚಿಮಘಟ್ಟದ ನದಿಗಳ ನೈಸರ್ಗಿಕ ಹರಿವನ್ನು ಬದಲಿಸಿ ತರುವ ನೀರಿನ ಸಿಂಹಪಾಲು ಕಬ್ಬಿನ ಬೆಳೆಗೂ, ಸಕ್ಕರೆ ಕಾರ್ಖಾನೆಗಳ ಹಾಗೂ ಡಿಸ್ಟಿಲರಿಗಳ ನೀರಾವರಿ ಅಗತ್ಯಕ್ಕೂ ಬಳಕೆಯಾಗುತ್ತದೆ ಎಂಬ ಬಲವಾದ ವಾದಗಳಿವೆ.
ಈ ವಾದಗಳನ್ನು ಅಲ್ಲಿನ ಮುಖಂಡರು ಸಂಪೂರ್ಣವಾಗಿ ಅಲ್ಲಗಳೆದರೂ ಗುಟ್ಟಾಗಿ ಉಳಿದಿಲ್ಲ. ಉತ್ತರ ಕರ್ನಾಟಕದ ರಾಜಕೀಯ ಮತ್ತು ಸಹಕಾರಿ ಕ್ಷೇತ್ರವು ಸಕ್ಕರೆ ಕಾರ್ಖಾನೆಗಳ ಸುತ್ತ ಗಟ್ಟಿಯಾಗಿ ಹೆಣೆದುಕೊಂಡಿದೆ. ಹಲವು ಪ್ರಮುಖ ರಾಜಕಾರಣಿಗಳು ಸಕ್ಕರೆ ಕಾರ್ಖಾನೆಗಳ ಒಡೆಯರು ಅಥವಾ ನೇರ ಪ್ರಭಾವ ಹೊಂದಿದವರು. ಆದ್ದರಿಂದಲೇ ಈ ವಾದಕ್ಕೆ ಪುಷ್ಠಿ ಸಿಕ್ಕಂತಾಗುತ್ತದೆ.
ಸ್ಥಳೀಯವಾಗಿ ಅಂತರ್ಜಲ ಕುಸಿದು, ಅಸ್ತಿತ್ವದಲ್ಲಿರುವ ನದಿಗಳಲ್ಲಿ ನೀರು ಬತ್ತುವಾಗ ಕಾರ್ಖಾನೆಗಳ ಅಸ್ತಿತ್ವಕ್ಕೆ ಕುತ್ತು ಬರುತ್ತದೆ. ಹೀಗಾಗಿ ಬೃಹತ್ ನೀರಾವರಿ ಮತ್ತು ನದಿ ತಿರುವು ಯೋಜನೆಗಳ ಮೂಲಕ ನಿರಂತರ ನೀರು ಲಭ್ಯವಾಗುವಂತೆ ಮಾಡಲು ರಾಜಕೀಯ ಮಟ್ಟದಲ್ಲಿ ಒತ್ತಡವಿರಬಹುದು ಎಂಬ ಅಭಿಪ್ರಾಯಗಳೂ ಇವೆ.
ಹೀಗೆಲ್ಲಾ ಪರ-ವಿರೋದಗಳಿದ್ದರೂ, ಸರ್ಕಾರದ ದಾಖಲೆಗಳು ಮತ್ತು ನದಿ ಜೋಡಣೆ ಪ್ರಸ್ತಾವನೆಗಳ ಪ್ರಕಾರ, ಈ ಯೋಜನೆಗಳ ಮುಖ್ಯ ಉದ್ದೇಶ “ಕುಡಿಯುವ ನೀರು ಒದಗಿಸುವುದು” ಮತ್ತು “ಬರಪೀಡಿತ ಪ್ರದೇಶಗಳ ಕೆರೆಗಳನ್ನು ತುಂಬಿಸುವುದು” ಎಂದು ಅಧಿಕೃತವಾಗಿ ಬಿಂಬಿಸಲಾಗುತ್ತಿದೆ. ಕುಡಿಯುವ ನೀರಿನ ಹೆಸರಿನಲ್ಲಿ ಯೋಜನೆಗಳನ್ನು ಅನುಮೋದಿಸಿಕೊಂಡು, ಮುಂದುವರಿದು ಆ ನೀರನ್ನು ವಾಣಿಜ್ಯ ಬೆಳೆಗಳಿಗೆ ಅದರಲ್ಲೂ ಮುಖ್ಯವಾಗಿ ಕಬ್ಬಿಗೆ ಬಳಸಿಕೊಳ್ಳಲಾಗುತ್ತದೆ ಎಂದೇ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯನ್ನು ವಿರೋಧಿಸುವ ಉತ್ತರ ಕನ್ನಡದ ಜನ ನಿಲುವು ತಳೆದಿದ್ದಾರೆ.
ವಿಷಯ ಹೀಗಿದ್ದಾಗ, ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ಜೋಡಣೆಯಂತಹ ಯೋಜನೆಗಳ ಹಿಂದೆ ನೇರವಾಗಿ ಯಾವುದೇ ಒಂದು ಸಕ್ಕರೆ ಕಾರ್ಖಾನೆಯ ಅಧಿಕೃತ ಸಹಿ ಅಥವಾ ನೇರ ಪಾತ್ರದ ದಾಖಲೆಗಳು ಸಿಗದಿದ್ದರೂ, ಒಟ್ಟಾರೆ ರಾಜ್ಯದ ಕೃಷಿ ನೀತಿ ಮತ್ತು ಕಬ್ಬು-ಸಕ್ಕರೆ ಲಾಬಿಯ ಆರ್ಥಿಕ ಬೇಡಿಕೆಗಳೇ ಇಂತಹ ಬೃಹತ್ ಮತ್ತು ವಿನಾಶಕಾರಿ ಜಲ ಯೋಜನೆಗಳಿಗೆ ಪ್ರಮುಖ, ಪರೋಕ್ಷ ಪ್ರಚೋದನೆಗೆ ಕಾರಣ ಎಂಬುದು ಪರಿಸರ, ಜಲತಜ್ಞರ ಬಲವಾದ ವಾದ.
ಅಭಿವೃದ್ಧಿ ಯಾರಿಗಾಗಿ, ಅದರ ಪ್ರಯೋಜನ ಯಾರಿಗೆ, ನಷ್ಟವನ್ನು ಯಾರು ಭರಿಸುತ್ತಾರೆ ಎಂಬ ಪ್ರಶ್ನೆಗಳನ್ನು ಕೇಳುವುದು ಜನರ ಹಕ್ಕು. ಉತ್ತರ ಕನ್ನಡದ ಜನರು ತಮ್ಮ ಪರಿಸರದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದರೆ, ಅದಕ್ಕೆ ವೈಜ್ಞಾನಿಕ ಮಾಹಿತಿ ಮತ್ತು ಸಾರ್ವಜನಿಕ ಸಂವಾದದ ಮೂಲಕ ಉತ್ತರ ನೀಡಬೇಕು. ಯೋಜನೆಯ ಪರವಾಗಿ ಮಾತನಾಡುವವರಿಗೂ ವಿರೋಧಿಸುವವರಿಗೂ ಸಮಾನವಾಗಿ ಲಭ್ಯವಾಗುವ ಪರಿಸರ ಪರಿಣಾಮದ ಅಧ್ಯಯನಗಳು, ನೀರಿನ ಲಭ್ಯತೆಯ ಲೆಕ್ಕಾಚಾರಗಳು ಮತ್ತು ಪರ್ಯಾಯಗಳ ವಿಶ್ಲೇಷಣೆಗಳು ಬಹಿರಂಗವಾಗಲಿ.
ನದಿ ತಿರುವು ಯೋಜನೆಯಿಂದ ಕೆಲವರಿಗೆ ತಕ್ಷಣದ ಲಾಭ ಸಿಗಬಹುದು. ಆದರೆ ಅದೇ ಯೋಜನೆಯಿಂದ ಉಂಟಾಗುವ ಪರಿಸರ ಹಾನಿಯ ಬೆಲೆ ದಶಕಗಳವರೆಗೆ ಪಾವತಿಸಬೇಕಾಗಬಹುದು. ಲಾಭವನ್ನು ಖಾಸಗಿಯಾಗಿ ಅನುಭವಿಸಿ, ನಷ್ಟವನ್ನು ಸಾರ್ವಜನಿಕರ ಮೇಲೆ ಹೊರಿಸುವ ಅಭಿವೃದ್ಧಿ ಮಾದರಿ ನಿಜವಾದ ಜನಪರ ಅಭಿವೃದ್ಧಿಯಲ್ಲ!
– ಸೌಪರ್ಣಿಕಾ- ಕೆನರಾ ನೆಕ್ಸ್ಟ್ ಡೆಸ್ಕ್


